ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದಕ್ಕೆ ಕೋಪಗೊಂಡು ಆ ನಾಯಿಯ ಮಾಲೀಕನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಜೇಮ್ಸ್ ಎಂಬಾತ ದಾಳಿ ಮಾಡಿರುವ ಆರೋಪಿ. ಸುಂದರ್ರಾಜ್ ಗಾಯಗೊಂಡಿರುವ ವ್ಯಕ್ತಿ.
ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ತಾನು ಸಾಕಿದ ನಾಯಿ ಬೊಗಳಿದ್ದಕ್ಕೆ ಸುಂದರ್ರಾಜ್ ಅವರು ನಾಯಿಗೆ ಬೈಯುತ್ತಿರುವುದನ್ನು ಕಂಡ ಪಕ್ಕದ ಮನೆಯ ಜೇಮ್ಸ್, ಸುಂದರ್ ತನಗೇ ಬೈಯುತ್ತಿದ್ದಾನೆ ಎಂದು ಭಾವಿಸಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಸುಂದರ್ರಾಜ್ ಅವರ ಮುಖ ಬಹುತೇಕ ಸುಟ್ಟಿದ್ದು, ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಜೇಮ್ಸ್ ನಾಪತ್ತೆಯಾಗಿದ್ದಾನೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗೆ ಶೋಧ ಆರಂಭಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ : 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್ ಬಾವನ ಮೃತದೇಹ ಹೊರಕ್ಕೆ