ಚಿಕ್ಕಮಗಳೂರು: ಕಾಲಿಗೆ ಗುಂಡೆಟ್ಟು ಬಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ, ಕಳೆದ ಎರಡು ದಿನಗಳ ಹಿಂದೆ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಮಲೆನಾಡ ರೌಡಿಶೀಟರ್ ಅನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಕುಖ್ಯಾತ ರೌಡಿ ಪೂರ್ಣೇಶ್ ತಪ್ಪಿಸಿ ಕೊಂಡಿದ್ದ. ಇಂದು ಬೆಳಗ್ಗೆ ಬಾಳೆಹೊನ್ನೂರಿನ ಖಾಂಡ್ಯದ ಬ್ರಿಡ್ಜ್ ಬಳಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಪೂರ್ಣೇಶ್ ಪೊಲೀಸರ ಮೇಲೆ ಲಾಂಗ್ ಬೀಸಿದ್ದ ವೇಳೆ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ.
ಈ ವೇಳೆ, ಆಸ್ಪತ್ರೆಯಲ್ಲಿ ಕಾವಲಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಇವನ ಬಂಧನಕ್ಕಾಗಿ ಜಿಲ್ಲಾ ಎಸ್ಪಿ ವಿಕ್ರಂ ಅಮಟೆ ಏಳು ತಂಡವನ್ನು ರಚನೆ ಮಾಡಿ ಶೋಧ ಕಾರ್ಯವನ್ನು ಪ್ರಾರಂಭ ಮಾಡಿದ್ದರು. ಬಾಳೆಹೊನ್ನೂರು ಠಾಣೆ ಪಿಎಸ್ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿ ಸೆರೆಹಿಡಿಯಲಾಗಿದೆ. ಈತ ಪರಾರಿಯಾದ ವೇಳೆ, ಚಿಕ್ಕಮಗಳೂರು ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.
ಪ್ರೇಯಸಿಗೆ ಚಾಕು ಇರಿತ( ಪ್ರತ್ಯೇಕ ಘಟನೆ): ಮದುವೆಯಾಗಲು ನಿರಾಕರಿಸಿದಳು ಎಂದು ಪ್ರೇಯಸಿಗೆ ಪ್ರಿಯಕರನೊಬ್ಬ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹಾಡೋನಹಳ್ಳಿಯ ಚೇತನ್ ಎಂಬಾತ ಅದೇ ಗ್ರಾಮದ ಯುವತಿಗೆ ಚಾಕು ಇರಿದಿದ್ದಾನೆ. ಕಳೆದ ಏಳು ವರ್ಷಗಳಿಂದ ಚೇತನ್ ಯುವತಿಯನ್ನ ಪ್ರೀತಿಸುತ್ತಿದ್ದ. ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಕೋಪಗೊಂಡು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಚಾಕುವಿನಿಂದ ಇರಿದಿದ್ದಾನೆ.
ಪತಿಯನ್ನು ಕೊಂದ ಪತ್ನಿ: ಪತಿಯನ್ನು ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಮಂಗಳೂರು ನಗರದ ನಂತೂರು ಬಳಿ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಗದಗ ಜಿಲ್ಲೆಯ ಇಟಗಿ ಗ್ರಾಮದ ನಿವಾಸಿ ಹನುಮಂತಪ್ಪ (39) ಎಂಬಾತನನ್ನು ಪತ್ನಿ ಗೀತಾ ಹತ್ಯೆ ಮಾಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಹನುಮಂತಪ್ಪ ಮದ್ಯವ್ಯಸನಿಯಾಗಿದ್ದು, ಕುಡಿದು ಮನೆಗೆ ಬಂದು ನಿತ್ಯ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದನಂತೆ. ಜ.10ರ ರಾತ್ರಿ ಕುಡಿದು ಬಂದಿದ್ದ ಆತ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ, ಮಕ್ಕಳೊಂದಿಗೆ ಊಟ ಮಾಡಿ ಮಲಗಿದ ನಂತರವೂ ಮಾತಿನ ಚಕಮಕಿ ಮುಂದುವರೆಸಿದ್ದಾನೆ. ಪತಿ, ಪತ್ನಿಯ ಮಧ್ಯೆ ಜಗಳ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಹನುಮಂತಪ್ಪನ ಕುತ್ತಿಗೆಯನ್ನು ಪಂಚೆಯಿಂದ ಬಿಗಿದು ಪತ್ನಿ ಗೀತಾ ಹತ್ಯೆ ಮಾಡಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಹತ್ಯೆ ಮಾಡಿರುವುದು ತಿಳಿದಿ ಬಂದಿತ್ತು.
ಇದನ್ನೂ ಓದಿ: ಪತ್ನಿ ಮೇಲಿನ ಕೋಪಕ್ಕೆ ಮಗನಿ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: 3 ವರ್ಷದ ಬಾಲಕ ಸಾವು