ಚಿಕ್ಕಮಗಳೂರು: ಉತ್ತಮ ಪ್ರಜಾಕೀಯ ಪಕ್ಷದ ವಿಚಾರಗಳಿಂದ ಜನರಿಗೆ ಅರಿವು ಮೂಡಿಸುತ್ತಿದ್ದ, ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್ಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್ಗೆ ಶಾಸಕರು ಕೊಲೆ ಬೆದರಿಕೆ ಹಾಕಿ, ರಾತ್ರೋರಾತ್ರಿ ಪೋಲಿಸ್ ಸ್ಟೇಷನ್ಗೆ ಕರೆಸಿ ವಾರ್ನಿಂಗ್ ಮಾಡಲು ಹೇಳಿದ್ದಾರೆ ಎಂದು ಸಚಿನ್ ಮರ್ಕಲ್ ದೂರಿದ್ದಾರೆ.
ಪ್ರವಾಹದಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರಸ್ತೆ ಹದಗೆಟ್ಟು ಹೋಗಿದೆ. ಶಾಸಕರು ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಅಭಿವೃದ್ಧಿಯತ್ತ ಗಮನ ಹರಿಸಿಲ್ಲ ಎಂದು ನಾನು ಮಾತಾಡಿದ್ದೆ.
ಈ ಹಿನ್ನೆಲೆ ಶಾಸಕ ಎಂ.ಪಿ.ಕುಮಾರಸ್ವಾಮಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪರಿಹಾರದ ಹಣ ಏನಾಯಿತು ಎಂದು ಪ್ರಶ್ನಿಸುವುದು ತಪ್ಪೇ? ಪ್ರಜೆಗಳಿಂದ ಆಯ್ಕೆಯಾಗಿದ್ದ ಶಾಸಕ ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ನಾಳೆ ಏನಾದರೂ ನನ್ನ ಜೀವಕ್ಕೆ ತೊಂದರೆಯಾದರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರೇ ಹೊಣೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.