ಚಿಕ್ಕಮಗಳೂರು: ನಗರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಬೈಕ್ ಸವಾರನ ಒಂದು ಕಾಲಿಗೆ ಗಂಭೀರ ಗಾಯವಾಗಿದೆ.
ನಗರದ ಎನ್ಎಂಸಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಲಾರಿ ಹೋಗುತ್ತಿದ್ದ ವೇಳೆ ಬೈಕ್ ಸವಾರ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಆತನ ಕಾಲಿನ ಮೇಲೆ ಲಾರಿ ಹರಿದಿದೆ. ನಿವೃತ್ತ ಎಎಸ್ಐ ಚಿಕ್ಕೇಗೌಡ ಈ ಅಪಘಾತದಲ್ಲಿ ತುತ್ತಾದ ವ್ಯಕ್ತಿಯಾಗಿದ್ದು, ಚಿಕ್ಕೇಗೌಡನ ಒಂದು ಕಾಲು ಸಂಪೂರ್ಣ ಗಾಯಗೊಂಡಿದೆ.
ಚಿಕ್ಕೇಗೌಡ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೆಲ ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿಯಾಗಿದ್ದರು. ಗಂಭೀರ ಅಪಘಾತಕ್ಕೆ ಒಳಗಾದ ಚಿಕ್ಕೇಗೌಡನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.