ಚಿಕ್ಕಮಗಳೂರು: ಹೊಲ-ಗದ್ದೆ, ತೋಟ, ಬಯಲು ಪ್ರದೇಶದಲ್ಲಿ ಹುತ್ತ ಬೆಳೆಯುವುದನ್ನು ನಾವು ನೋಡಿರುತ್ತೇವೆ. ಆದರೆ, ದೇವರ ಮೈ ಮೇಲೆ ಹುತ್ತ ಬೆಳೆಯೋದನ್ನು ಎಲ್ಲಾದ್ರು ನೀವು ನೋಡಿದ್ದೀರಾ?. ಅಂತಹ ಅಪರೂಪದ ಘಟನೆಗೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕುಂದೂರು ಗ್ರಾಮ ಸಾಕ್ಷಿಯಾಗಿದೆ.
ಹೌದು, ಗ್ರಾಮ ದೇವತೆಯ ಮೇಲೆ ಅಚ್ಚರಿ ಎಂಬಂತೆ ಹುತ್ತ ಬೆಳೆಯುತ್ತಿದೆ. ಗ್ರಾಮಸ್ಥರ ಕಣ್ಣೆದುರೆ ನೋಡ ನೋಡುತ್ತಿದ್ದಂತೆ ದಿನದಿಂದ ದಿನಕ್ಕೆ ಇಡೀ ದೇವಾಲಯವನ್ನು ಆವರಿಸಿಕೊಳ್ಳುತ್ತಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಈಕೆಯದ್ದೇ ಸದ್ದು - ಸುದ್ದಿ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಂದೂರು ಗ್ರಾಮದ ಹುತ್ತದ ಕೆಂಪಮ್ಮ ದೇವಾಲಯದಲ್ಲಿ ಇಂತಹ ಅಪರೂಪದ ಘಟನೆ ಜರುಗುತ್ತಿದೆ.
ದೇವಿಯ ಗರ್ಭ ಗುಡಿಯಲ್ಲಿನ ವಿಗ್ರಹದ ಮೇಲೆ ಹುತ್ತ ಬೆಳೆಯುತ್ತಿರುವುದು ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ದಶಕ ಗಳಿಂದಲೂ ಭಕ್ತರು ಕೆಂಪಮ್ಮ ದೇವಿಯನ್ನು ಭಯ, ಭಕ್ತಿಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇವಿಯ ಮೂರ್ತಿ ಮೇಲೆ ಹುತ್ತ ಬೆಳೆಯುತ್ತಿರುವುದು ಮಾತ್ರ ಪವಾಡ ಎನಿಸಿದೆ. ಕಳೆದ 15 ವರ್ಷಗಳ ಹಿಂದೆ ಇಂತಹದೊಂದು ಘಟನೆ ನಡೆದಿತ್ತು. ಇದೀಗ, ಮತ್ತೆ ಪುನರಾವರ್ತನೆ ಆಗುತ್ತಿರುವುದು ಭಕ್ತರಲ್ಲಿ ಕೌತುಕದ ಜೊತೆಗೆ ದೇವಿಯ ಮೇಲೆ ಮತ್ತಷ್ಟು ನಂಬಿಕೆ ಮೂಡುವಂತೆ ಮಾಡಿದೆ.
ಇನ್ನು ಕೆಂಪಮ್ಮ ದೇವಿಯ ಮೈ ಮೇಲೆ ಇದ್ದಕ್ಕಿದ್ದಂತೆ ಹುತ್ತ ಬೆಳೆಯುತ್ತಿರುವುದನ್ನು ನೋಡಿದ ಗ್ರಾಮಸ್ಥರು ದೇವಿಯ ಮೂರ್ತಿಯನ್ನು ವಿಸರ್ಜನೆ ಮಾಡಿ, ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಈ ಬಾರಿ ಮೂರ್ತಿಯನ್ನ ವಿಸರ್ಜಿಸಿದ ಬಳಿಕ ಕಲ್ಲಿನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ದೇವಿಯೇ ಭಕ್ತರಿಗೆ ಸೂಚನೆ ನೀಡಿದ್ದಾಳೆ.
ಕಳೆದ ಒಂದೂವರೆ ದಶಕಗಳ ಹಿಂದೆ ಹೀಗೆಯೇ ದೇವಿಯ ಮೈ ಮೇಲೆ ಹುತ್ತ ಬೆಳೆದ ಪರಿಣಾಮ ಮೂರ್ತಿಯನ್ನು ವಿಸರ್ಜಿಸಿ ಪುನರ್ ಪ್ರತಿಷ್ಠಾಪಿಸಲಾಗಿತ್ತು. ಹಲವು ತಿಂಗಳಿಂದ ದೇವಿಯ ಎಡಗೈ ಸೇರಿದಂತೆ ವಿವಿಧ ಭಾಗಗಳಲ್ಲಿ ಹುತ್ತ ಬೆಳೆಯುತ್ತಿರುವುದನ್ನ ಕಂಡ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಿಂದ, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹುತ್ತದ ಕೆಂಪಮ್ಮನದ್ದೇ ಮಾತು. ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ಈ ಅಚ್ಚರಿಯನ್ನ ಕಣ್ತುಂಬಿಕೊಳ್ಳಲು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರಕೃತಿಯ ವಿಸ್ಮಯ : ಮೂಡಿಗೆರೆಯಲ್ಲಿ ಅಲುಗಾಡಿತಾ 400 ವರ್ಷದ ಇತಿಹಾಸವಿರುವ ಹುತ್ತ!?
ಒಟ್ಟಾರೆ ವೈಜ್ಞಾನಿಕ ಕಾರಣದಿಂದಾಗಿಯೋ ಅಥವಾ ಭಕ್ತರ ನಂಬಿಕೆಯೋ ಗೊತ್ತಿಲ್ಲ. ಆದ್ರೆ, ಈ ಅಚ್ಚರಿಯ ಬೆಳವಣಿಗೆಗೆ ಕಡೂರು ತಾಲೂಕಿನ ಕುಂದೂರು ಗ್ರಾಮ ಸಾಕ್ಷಿಯಾಗಿರುವುದಂತು ಸತ್ಯ. ಹುತ್ತದ ಬೆಳವಣಿಗೆ ಹಿಂದಿನ ಸತ್ಯ ಹಾಗೂ ಸಾವಿರಾರು ಭಕ್ತರ ನಂಬಿಕೆಗೆ ಹುಸಿಯಾಗದಂತೆ ಸಂಬಂಧಪಟ್ಟವರು ಸಾಕ್ಷೀಕರಿಸಬೇಕಿದೆ. ಸದ್ಯಕ್ಕೆ ಕೆಂಪಮ್ಮ ಕಾಫಿನಾಡ ಕೇಂದ್ರ ಬಿಂದುವಾಗಿದ್ದು, ಭಕ್ತರ ಗಮನ ಸೆಳೆಯುತ್ತಲೇ ಇದ್ದಾಳೆ. ಹುತ್ತದ ಮಹಿಮೆ ಅಚ್ಚರಿ ಮೂಡಿಸಿದ್ದು, ಜನ ಮರಳೋ ಜಾತ್ರೆ ಮರಳೋ ಎಂಬಂತೆ ಪ್ರತಿನಿತ್ಯ ನೂರಾರು ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ.