ಚಿಕ್ಕಮಗಳೂರು: ಕನ್ನಡ ಸೇನೆ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಜಾಗೃತಿ ಸಮಾವೇಶವನ್ನು ನಗರದ ವಿಜಯಪುರದಲ್ಲಿರುವ ಗಣಪತಿ ಪೆಂಡಾಲ್ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಪ್ಪ ತಾಲೂಕಿನ ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ನೇರವಾಗಿ ಜಿಲ್ಲಾ ಒಕ್ಕಲಿಗರ ಸಭಾಭವನಕ್ಕೆ ಆಗಮಿಸಿದ್ದು, ಬಾಲ ಗಂಗಾಧರನಾಥ ಸ್ವಾಮೀಜಿ ಭಾವಚಿತ್ರಕ್ಕೆ ನಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ವಿನಯ್ ಗುರೂಜಿ ಅವರಿಗೆ ಹಾರ ಹಾಕಿ ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ನಂತರ ಅದೇ ಹಾರ ಹಾಗೂ ಹಣ್ಣು ಹಂಪಲನ್ನು ಪಕ್ಕದಲ್ಲಿಯೇ ಇದ್ದ ಮಹಿಳೆಯೋರ್ವರಿಗೆ ಹಾಕಿ ಅವರ ಆಶೀರ್ವಾದ ಪಡೆದಿದ್ದು ಗೂರೂಜಿ ಅವರ ವಿಶೇಷವಾಗಿತ್ತು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಗುರೂಜಿ ಅವರನ್ನು ಕನ್ನಡಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಮಾಡಿದರು. ಮಹಿಳಾ ಅಭಿಮಾನಿಗಳು ಪುಷ್ಪಗಳ ಸುರಿಮಳೆಯನ್ನು ಗುರೂಜಿ ಅವರ ಮೇಲೆ ಸುರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲಾಯಿತು. ಕನ್ನಡ ಸೇನೆ ಸಂಘಟನೆ ತುಂಬಾ ಅದ್ಧೂರಿಯಾಗಿ 64ನೇ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.