ಚಿಕ್ಕಮಗಳೂರು : ಜಿಲ್ಲೆಯಲ್ಲಿನ ಪ್ರತಿ ಗೊಲ್ಲರಹಟ್ಟಿ ಗ್ರಾಮಗಳ ಮೂಲಸೌಕರ್ಯಕ್ಕಾಗಿ 10 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಕಡೂರು ತಾಲೂಕಿನ ಜೋಡಿ ಲಿಂಗದಹಳ್ಳಿ ಗ್ರಾಮದಲ್ಲಿ ಜೋಡಿ ಲಿಂಗದಹಳ್ಳಿಯಿಂದ-ತಾಂಡಾದವರೆಗೂ ₹20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ₹10 ಲಕ್ಷ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜೋಡಿ ಲಿಂಗದಹಳ್ಳಿಯಿಂದ-ಜೋಡಿಲಿಂಗದಹಳ್ಳಿ ತಾಂಡಾದವರೆಗೆ ಒಟ್ಟು 50 ಲಕ್ಷದ ರಸ್ತೆ ಕಾಮಗಾರಿಯಲ್ಲಿ ಈಗಾಗಲೇ ರೂ. 30 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ₹20 ಲಕ್ಷದ ಮುಂದಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.
ಹನುಮನಹಳ್ಳಿ ಮತ್ತು ಮಲ್ಲಿಗೇನಹಳ್ಳಿ ರಸ್ತೆ ನಿರ್ಮಾಣದ ಕುರಿತು ಈಗಾಗಲೇ ಪ್ರಸ್ತಾವನೆ ಬಂದಿದೆ. ಅನುಮೋದನೆ ಕೂಡಾ ನೀಡಲಾಗಿದೆ. ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಸಿದ್ಧಾಪುರ ಗ್ರಾಮದಲ್ಲಿ ಬಸ್ ನಿಲ್ದಾಣ ಹಾಳು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳುಮಾಡುವುದು ಅಪರಾಧ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ತಿಳಿಸಿದರು.