ಗುಡಿಬಂಡೆ(ಚಿಕ್ಕಬಳ್ಳಾಪುರ): ಬಿಜೆಪಿ ಸರಕಾರ ಧರ್ಮ-ಧರ್ಮಗಳ ಮತ್ತು ಜಾತಿ-ಜಾತಿಗಳ ನಡುವೆ ಕಿತ್ತಾಟ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಟೀಕಿಸಿದರು.
ಗುರುವಾರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯಲ್ಲಿ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿ ನೂತನವಾಗಿ ಯಾವ ಯೋಜನೆಯನ್ನೂ ಮಾಡಿಲ್ಲ. ಮನಮೋಹನ್ ಸಿಂಗ್ ಮತ್ತು ಇಂದಿರಾಗಾಂಧಿ ಮಾಡಿರುವ ಯೋಜನೆಗಳಿಗೆ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವಂತಹ ಗಣ್ಯ ವ್ಯಕ್ತಿಗಳ ಹೆಸರು ಇಟ್ಟಿದ್ದಾರೆ. ಅದೇ ಯೋಜನೆಗಳಿಗೆ ಹೊಸ ಹೆಸರುಗಳನ್ನು ನಾಮಕರಣ ಮಾಡಿಕೊಂಡು ಬಿಜೆಪಿ ಪ್ರಚಾರ ಪಡೆಯುತ್ತಿದೆ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ಗೆ ದೊಡ್ಡ ಸವಾಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಅನೇಕ ಕುತಂತ್ರಗಳನ್ನು ಮಾಡುತ್ತದೆ. ಆದ್ದರಿಂದ ನಮ್ಮ ಪಕ್ಷಕ್ಕೆ ಈ ಚುನಾವಣೆ ಸವಾಲಾಗಿದ್ದು ಅದನ್ನು ನಾವೆಲ್ಲ ಮೆಟ್ಟಿನಿಂತು ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.
ನೂತನವಾಗಿ ಆಯ್ಕೆಯಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ರೆಡ್ಡಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಅಧಿಕಾರ ಹಸ್ತಾಂತರ ಮಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ಗಣ್ಯ ವ್ಯಕ್ತಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಇದನ್ನೂ ಓದಿ : ಒಕ್ಕಲಿಗ ಸಮುದಾಯದ ಮೀಸಲು ಹೆಚ್ಚಳಕ್ಕೆ ಸಂಸದ ಡಿ ಕೆ ಸುರೇಶ್ ಆಗ್ರಹ