ಗುಡಿಬಂಡೆ: ಹೈನುಗಾರಿಕೆ ಕೈಗೊಳ್ಳುವ ರೈತರು ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳನ್ನು ರಕ್ಷಣೆ ಮಾಡಬೇಕೆಂದು ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಬಿ.ಹೆಚ್.ವೀರಭದ್ರರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ 16ನೇ ಸುತ್ತಿನ ಉಚಿತ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲುಬಾಯಿ ರೋಗ ಮಾರಣಾಂತಿಕವಾಗಿದೆ. ಅದು ವೈರಸ್‍ನಿಂದ ಬರಲಿದೆ ಎಂದು ಹೇಳಿದರು.
ಈ ರೋಗ ಜಾನುವಾರುಗಳಲ್ಲಿ ಕಾಣಿಸಿಕೊಂಡರೆ ಹಾಲು ಕೊಡುವ ಸಾಮರ್ಥ್ಯ ಕಡಿಮೆ ಹಾಗೂ ಗರ್ಭಧಾರಣೆ ಶಕ್ತಿ ಕಳೆದುಕೊಳ್ಳುತ್ತವೆ. ಬೇಸಿಗೆ ದಿನಗಳಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತವೆ. ಹಾಗಾಗಿ ರೈತರು ತಮ್ಮ ಜಾನುವಾರಗಳ ಆರೋಗ್ಯಕ್ಕಾಗಿ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಕ್ಕೂಟ ಹಾಗೂ ಪಶುಪಾಲನೆ ಇಲಾಖೆಯ ಸಂಯುಕ್ತವಾಗಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕೆಯನ್ನು ಹಾಕಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಅಶ್ವತ್ಥರೆಡ್ಡಿ ಮಾತನಾಡಿ, ಇಂದಿನ ದಿನಗಳಲ್ಲಿ ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಭಾಗದ ಬಹುತೇಕ ರೈತರು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಒಂದು ರಾಸುವಿನಲ್ಲಿ ಕಂಡು ಬಂದರೆ ಉಳಿದ ರಾಸುಗಳಿಗೂ ಹರಡುತ್ತದೆ. ಜಾನುವಾರು ಉಳಿದರೆ ರೈತ ಉಳಿದಂತೆ ಎಂಬುದನ್ನು ಅರಿತು ಹಾಗೂ ಉಚಿತ ಲಸಿಕೆ ಎಂಬ ತಾತ್ಸಾರ ಮನೋಭಾವವನ್ನು ತೊರೆದು ಎಲ್ಲರೂ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿ ಜೊತೆಗೆ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿ ಎಂದರು.
ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಉಚಿತ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಕಾರ್ಯಕ್ರಮದಲ್ಲಿ ಅಸುನೀಗಿರುವ ರಾಸುಗಳ ವಿಮಾ ಚೆಕ್ಗಳನ್ನು 13 ಜನ ಫಲಾನುಭವಿಗಳಿಗೆ ವಿತರಿಸಲಾಯಿತು.