ಚಿಕ್ಕಬಳ್ಳಾಪುರ: ನಿಯಂತ್ರಣ ತಪ್ಪಿದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೂ ಹರಿದ ಪರಿಣಾಮ ವಾಹನ ಸವಾರ ಮತ್ತು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಡಿಬಂಡೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಚಿಮುಕುಲಹಳ್ಳಿ ತಾಂಡದ ಮಹಿಳೆ ತುಳಸಿಭಾಯಿ ಸ್ಥಳದಲ್ಲೇ ಸಾವನ್ನಪ್ಪಿದರೆ, ದ್ವಿಚಕ್ರ ವಾಹನ ಸವಾರ ನಂದೀಶ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳಿದಿದ್ದಾರೆ.
ಆಂಧ್ರಪ್ರದೇಶ ಮೂಲದ ಲಾರಿ ಭಾರದ ಕಲ್ಲುಗಳನ್ನು ತುಂಬಿಕೊಂಡು, ಗುಡಿಬಂಡೆ ಮೂಲಕ ಗೌರಿಬಿದನೂರು ಕಡೆಗೆ ಚಲಿಸುತ್ತಿತ್ತು. ಕಣಿವೆಯ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲೇ ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆ ಮೇಲೂ ಹರಿದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಲಾರಿಗಳ ಅತಿ ವೇಗದಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ಸಹ ಮಾಡಲಾಯಿತು.
ಸ್ಥಳಕ್ಕೆ ಆಗಮಿಸಿದ ಗುಡಿಬಂಡೆ ಪೊಲೀಸರು ಪ್ರತಿಭಟನಾಕಾರರಿಗೆ ತಿಳಿಹೇಳಿ ಪ್ರತಿಭಟನೆ ತಡೆದರು. ಅಪಘಾತ ಆಗುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಕುರಿತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತ್ಯೇಕ ಘಟನೆಗಳು- ಗೂಡ್ಸ್ ವಾಹನ ಪಲ್ಟಿಯಾಗಿ 24 ಕುರಿಗಳು ಸಾವು- ಚಾಮರಾಜನಗರ: ಗೂಡ್ಸ್ ವಾಹನ ಪಲ್ಟಿಯಾಗಿ 24 ಕುರಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪ ಬುಧವಾರ ಸಂಜೆ ನಡೆದಿದೆ. ಕುರಿ ವ್ಯಾಪಾರಿ ಪ್ರಜ್ವಲ್ ಎಂಬುವರಿಗೆ ಸೇರಿದ ಕುರಿಗಳು ಇವಾಗಿವೆ. ವಿಜಯಪುರದಿಂದ ತಮಿಳುನಾಡಿನ ಕೊಯಮತ್ತೂರಿಗೆ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಗೂಡ್ಸ್ ವಾಹನದಲ್ಲಿದ್ದ ಮೂವರು ಹಾಗೂ ಇನ್ನುಳಿದ 50ಕ್ಕೂ ಹೆಚ್ಚು ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.
ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆ ಸಾವು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದ ಬಳಿ ಬುಧವಾರ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಜಿಂಕೆಗೆ ವಾಹನ ಡಿಕ್ಕಿ ಹೊಡೆದಿದೆ. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಜಿಂಕೆ, ರಸ್ತೆ ಬದಿಗೆ ಬಿದ್ದು ನರಳಾಡಿ ಸಾವನ್ನಪ್ಪಿದೆ. ಸ್ಥಳಕ್ಕೆ ಚಾಮರಾಜನಗರ ಬಫರ್ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ರಸ್ತೆ ಅಪಘಾತ: ದಂಪತಿ ಸಾವು