ಗುಡಿಬಂಡೆ: ತಾಲೂಕಿನ ಬೋಗೇನಹಳ್ಳಿ ಬಳಿ ಫೆ. 6 ರಂದು ಲಕ್ಷ್ಮೀನರಸಿಂಹಪ್ಪ (45) ಎಂಬುವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ರಾಜಕೀಯ ವೈಷಮ್ಯ ಕಾರಣ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳಾದ ಬೋಗೇನಹಳ್ಳಿ ಗ್ರಾಮದ ರಾಜಾರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹರೆಡ್ಡಿ ಎಂಬುವರನ್ನು ಬಂಧಿಸಿದೆ. ಮತ್ತೋರ್ವ ಆರೋಪಿ ಮಂಜುನಾಥ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.
ಕೊಲೆಯಾದ ಲಕ್ಷ್ಮೀನರಸಿಂಹಪ್ಪ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆರೋಪಿ ಶ್ರೀರಾಮರೆಡ್ಡಿ ಪತ್ನಿ ವಿರುದ್ಧ ಮತ್ತೋರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ರಾಜಕೀಯ ಸೆಣಸಾಟ ನಡೆಸಿದ್ದ. ಆದರೂ ಚುನಾವಣೆಯಲ್ಲಿ ಶ್ರೀರಾಮರೆಡ್ಡಿ ಪತ್ನಿಯೇ ಜಯಶಾಲಿಯಾಗಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ದ್ವೇಷದಿಂದ ಇಬ್ಬರೂ ಕಿತ್ತಾಡಿದ್ದರು. ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಪಂಚಾಯಿತಿ ಮೂಲಕ ಬಗೆಹರಿದಿತ್ತು ಎನ್ನಲಾಗಿದೆ.
ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಚು ರೂಪಿಸಿದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳ ಜತೆ ಸೇರಿ ಲಕ್ಷ್ಮೀನರಸಿಂಹಪ್ಪನನ್ನು ಕೊಲೆ ಮಾಡಿದ್ದಾನೆ. ಲಕ್ಷ್ಮೀನರಸಿಂಹಪ್ಪ ಬರುವ ದಾರಿ ಮಧ್ಯೆ ಮೋರಿ ಕೆಳಗೆ ಅವಿತು ಕೂತಿದ್ದ ಆರೋಪಿಗಳು ಬೈಕ್ ಅಡ್ಡ ಹಾಕಿ ದಾಳಿ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.