ಚಿಕ್ಕಬಳ್ಳಾಪುರ: ನಗರದ ಪ್ರಗತಿ ಹಾಗೂ ರಾಯಲ್, ಮಹಿಳಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಕೆಎಸ್ಆರ್ಟಿಸಿ ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ಶ್ರೀನಿವಾಸಪುರ ತಾಲೂಕು ಗೌನಪಲ್ಲಿ ಗ್ರಾಮದ ಅಕ್ಕಪಕ್ಕದ ಹಳ್ಳಿಗಳಿಂದ 200ಕ್ಕೂ ಅಧಿಕ ವಿದ್ಯಾರ್ಥಿಗಳು ನಗರದ ಹಲವಾರು ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಆದರೆ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸಾರಿಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಬೇಸತ್ತು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ನಮ್ಮ ಸಮಸ್ಯೆಗಳ ಕುರಿತು ಕೆಎಸ್ಆರ್ಟಿಸಿ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದೆ. ಶೀಘ್ರವೇ ಸರಿಪಡಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿ ಸುನೀಲ್ ಎಚ್ಚರಿಕೆ ನೀಡಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕಾಲೇಜು ಮುಗಿಯುತ್ತದೆ. ಸಂಜೆ 6 ಗಂಟೆವರೆಗೆ ಬಸ್ಗಾಗಿ ಕಾಯಬೇಕು. ಸಾರಿಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿನಿ ಸಾಯಿ ಪೂಜಾ ಮನವಿ ಮಾಡಿದರು.
ನಿತಿನ್ ರೆಡ್ಡಿ, ಸಂಧ್ಯಾ, ಅನುಷಾ, ಐಶ್ವರ್ಯ, ಆಫ್ರಿದ್, ಬಾಬು, ದೇವರಾಜ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.