ಚಿಕ್ಕಬಳ್ಳಾಪುರ: ಶಾಲೆಗೆ ತೆರಳಲು ಬಸ್ಗಾಗಿ ರಸ್ತೆ ಬದಿ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿ ಮೇಲೆ ಟಾಟಾ ಏಸ್ ವಾಹನ ಹರಿದಿದೆ. ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರು ಗೇಟ್ನಲ್ಲಿ ನಡೆದಿದೆ.
ಬಸವಪಟ್ಟಣ ಗ್ರಾಮದ ಆಂಜಿನಪ್ಪರ ಪುತ್ರ 13 ವರ್ಷದ ಚೇತನ್ ಮೃತ ಬಾಲಕ. ಶಿಡ್ಲಘಟ್ಟ ನಗರದ ಖಾಸಗಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೇತನ್, ತನ್ನ ಸ್ವಗ್ರಾಮ ಬಸವಪಟ್ಟಣದಿಂದ ಬಂದು ತಾದುರು ಗೇಟ್ ಬಳಿ ಬಸ್ಗಾಗಿ ಕಾಯುತ್ತ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಶಿಡ್ಲಘಟ್ಟ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಅತೀ ವೇಗವಾಗಿ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.
ಅಪಘಾತ ಸಮಯದಲ್ಲಿ ಸ್ಥಳದಲ್ಲೇ ಇದ್ದಂತಹ ಗ್ರಾಮದ ಕೆಲವು ಯುವಕರು ವಾಹನವನ್ನು ಹಿಂಬಾಲಿಸಿದಾಗ ಟಾಟಾ ಏಸ್ ಚಾಲಕ ಸ್ವಲ್ಪ ದೂರ ಕ್ರಮಿಸಿ ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ.
![Chetan is the student who died in a road accident](https://etvbharatimages.akamaized.net/etvbharat/prod-images/kn-ckb-02-19-accident-av-ka10046_19012021143015_1901f_1611046815_193.jpg)
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ತುಕ್ಕು ಹಿಡಿಯುತ್ತಿದೆ ಹುಬ್ಬಳ್ಳಿ ಗ್ಲಾಸ್ ಹೌಸ್ನಲ್ಲಿರುವ ಮಕ್ಕಳ ಚುಕುಬುಕು ರೈಲು