ಚಿಂತಾಮಣಿ : ಸಾರಿಗೆ ನೌಕರರ ಮುಷ್ಕರದ ನಡುವೆಯೇ ತಾಲೂಕಿನ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಮೆಕ್ಯಾನಿಕ್ನಿಂದ ಬಸ್ ಚಲಾವಣೆ ಮಾಡಿಸಿದ್ದಾರೆ.
ಸರ್ಕಾರದ ಒತ್ತಡಕ್ಕೆ ಮಣಿದ ಚಿಂತಾಮಣಿ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ, ಪೊಲೀಸ್ ಬಂದೋಬಸ್ತ್ನೊಂದಿಗೆ ಮೆಕ್ಯಾನಿಕ್ ಹನೀಫ್ ಎಂಬಾತನಿಂದ ಬಸ್ ಚಲಾವಣೆ ಮಾಡಿಸಿದ್ದಾರೆ. ಅಧಿಕಾರಿಯ ಸೂಚನೆ ಮೇರೆಗೆ ಮೆಕ್ಯಾನಿಕ್ ಹನೀಫ್, ಚಿಂತಾಮಣಿಯಿಂದ ಶ್ರೀನಿವಾಸಪುರಕ್ಕೆ ಜನರನ್ನು ಕರೆದೊಯ್ದು ಮತ್ತೆ ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಂದಿದ್ದಾನೆ.
ವೈದ್ಯರ ಸೂಚನೆ ಲೆಕ್ಕಿಸದ ಅಧಿಕಾರಿಗಳು : ಮೆಕ್ಯಾನಿಕ್ ಹನೀಫ್ ಅನಾರೋಗ್ಯ ಇರುವ ಕಾರಣ ಕಳೆದ ಒಂದು ವರ್ಷದ ಹಿಂದೆಯೇ ಆತ ಚಾಲಕ ಹುದ್ದೆಗೆ ಅನರ್ಹ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಡಿಪೋ ಅಧಿಕಾರಿ ಆತನ ಕೈಯ್ಯಲ್ಲಿ ಬಸ್ ಚಲಾವಣೆ ಮಾಡಿಸಿದ್ದಾರೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರೆ, ಶ್ರೀನಿವಾಸಪುರದಿಂದ ಬಸ್ ವಾಪಸ್ ಆಗುತ್ತಿದ್ದ ವೇಳೆ ಹನೀಫ್ಗೆ ಚಾಲನೆ ಮಾಡಲು ಸಾಧ್ಯವಾಗದ ಕಾರಣ ದೊಡ್ಡಗಂಜೂರು ಗ್ರಾಮದ ನಾಗಪ್ಪ ಎಂಬ ಮತ್ತೋರ್ವ ಮೆಕ್ಯಾನಿಕ್ ಬಸ್ ಚಲಾಯಿಸಿದ್ದಾನೆ. ಈ ಮೂಲಕ ಅಧಿಕಾರಿಗಳು ಜನರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಲ್ಲು ತೂರಾಟ : ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಸ್ ವಾಪಸಾಗುತ್ತಿದ್ದ ವೇಳೆ ದೊಡ್ಡಗಂಜೂರು ಮತ್ತು ಮಾಡಿಕೇರಿ ಮಧ್ಯೆ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್ನಲ್ಲಿ ಚಿಂತಾಮಣಿಗೆ ಬಸ್ ತರಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.