ಚಿಕ್ಕಬಳ್ಳಾಪುರ : ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದ ಬಾಲಕಿಯರಿಗೆ ಪೋಷಕರು ಬುದ್ದಿವಾದ ಹೇಳಿದ ಹಿನ್ನೆಲೆ ಅಕ್ಕ-ತಂಗಿಯರಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ನಡೆದಿದೆ. ಬಾಲಕಿಯರಿಗೆ ಕ್ರಮವಾಗಿ 16 ಹಾಗೂ 14 ವಯಸ್ಸಾಗಿತ್ತು.
ಮೃತ ಅಕ್ಕ-ತಂಗಿ ಇಬ್ಬರು ಗ್ರಾಮದ ಯುವಕನೋರ್ವನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದು ಪೋಷಕರು ಇಬ್ಬರು ಮಕ್ಕಳಿಗೆ ಬೈದು ಬುದ್ದಿವಾದ ಹೇಳಿದ್ದರಂತೆ. ಇದೇ ವಿಚಾರವಾಗಿ ಮನನೊಂದ ಅಕ್ಕ-ತಂಗಿಯರಿಬ್ಬರು, ಮನೆ ಬಿಟ್ಟು ಹೋಗಿದ್ದರು.
ಸಂಜೆಯಾದ್ರೂ ಇಬ್ಬರು ಮನೆಗೆ ಬಾರದ ಕಾರಣ ಪೋಷಕರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಇಬ್ಬರು ಪತ್ತೆಯಾಗಿರಲಿಲ್ಲ. ಈಗ ಇಬ್ಬರ ಮೃತ ದೇಹಗಳು ಕಂದವಾರ ಕೆರೆಯಲ್ಲಿ ಪತ್ತೆಯಾಗಿವೆ. ಇದನ್ನ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.