ಚಿಕ್ಕಬಳ್ಳಾಪುರ: ಜನರ ಜೊತೆ 'ಆತ್ಮೀಯ'ವಾಗಿದ್ದ ಗುಬ್ಬಚ್ಚಿ ಮೃತಪಟ್ಟ ಹಿನ್ನೆಲೆ, ಪುಟ್ಟದಾದ ಸಮಾಧಿ ಕಟ್ಟಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜನರು ಪಕ್ಷಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಅದರಲ್ಲೂ ಗುಬ್ಬಚ್ಚಿಗಳನ್ನು ಮನೆಯ ಕುಟುಂಬದ ಸದಸ್ಯರೆಂದು ಕಾಣುತ್ತಾರೆ. ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳುವ ಮುನ್ನ ಊರಿನ ಬಾಗಿಲಿನಲ್ಲಿ ಕೂತು ಗ್ರಾಮಸ್ಥರ ಮನ ಸೆಳೆಯುತ್ತಿದ್ದ ಈ ಗುಬ್ಬಚ್ಚಿ ಕೆಲ ದಿನಗಳ ಹಿಂದೆ ಇದ್ದಕ್ಕಿದಂತೆ ಕಾಣೆಯಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿತ್ತು. ನಂತರ ಇದೇ ಗುಬ್ಬಚ್ಚಿ ಮರಣದ ಸುದ್ದಿ ಗ್ರಾಮಸ್ಥರ ನೋವಿಗೆ ಕಾಣವಾಗಿತ್ತು.
ಇದನ್ನೂ ಓದಿ: ದಾವಣಗೆರೆ: ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!
ಗ್ರಾಮಸ್ಥರು ಸೇರಿ ಗುಬ್ಬಚ್ಚಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಮಾಧಿ ಕಟ್ಟಿದ್ದು 11ನೇ ದಿನದ ತಿಥಿ ಕಾರ್ಯದಲ್ಲಿ ಗ್ರಾಮದ ಮತ್ತು ಸುತ್ತಮುತ್ತಲಿನ ಜನಕ್ಕೂ ಊಟ ಹಾಕಿಸಿ ಪಕ್ಷಿ ಪ್ರೇಮ ಮೆರೆದಿದ್ದಾರೆ. ಇನ್ನೂ ಗ್ರಾಮದ ಹಲವೆಡೆ ಮತ್ತೆ ಹುಟ್ಟಿ ಬಾ ಗುಬ್ಬಚ್ಚಿ ಎಂದು ಬ್ಯಾನರ್ ಕಟ್ಟಿದ್ದಾರೆ. ಜೊತೆಗೆ ಪಕ್ಷಿಗಳನ್ನು ಸಂರಕ್ಷಿಸುವ ಅರಿವನ್ನು ಮೂಡಿಸಿದ್ದಾರೆ.