ಬಾಗೇಪಲ್ಲಿ : ಪುಟ್ಟಪರ್ತಿ ಗ್ರಾಮದಲ್ಲಿ ಜಿಲೆಟಿನ್ ಸ್ಫೋಟಕಗಳ ಶೇಖರಣೆ ಹಾಗೂ ಸಾಗಾಟ ತೆರವು ಮಾಡಿಸಬೇಕು. ಗ್ರಾಮಸ್ಥರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪುಟ್ಟಪರ್ತಿ, ಅಬಕವಾರಿಪಲ್ಲಿ ಗ್ರಾಮಸ್ಥರು ಜಿಲೆಟಿನ್ ಶೇಖರಣಾ ಘಟಕದ ಮುಂದೆ ಪ್ರತಿಭಟಿಸಿದರು.
ತಾಲೂನ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯ ಪುಟ್ಟಪರ್ತಿ ಗ್ರಾಮದ ಹೊರವಲಯದ ಸರ್ವೇ ನಂ. 292/1 ಜಮೀನಿನಲ್ಲಿ ಪಂಜಾಬ್ ಮೂಲದವರು ಮನೆ ನಿರ್ಮಿಸಿದ್ದಾರೆ. ಇಲ್ಲಿ ಶಿವನಾರಾಯಣ ಎಂಟರ್ಪ್ರೈಸಸ್ ಹೆಸರಿನಲ್ಲಿ ಜಿಲೆಟಿನ್ ಶೇಖರಣಾ ಘಟಕ ಮಾಡಿದ್ದಾರೆ. ನಿತ್ಯ ದ್ವಿಚಕ್ರ ಸೇರಿ ವಿವಿಧ ವಾಹನಗಳಲ್ಲಿ ಜಿಲೆಟಿನ್ ಸಾಗಣೆ, ಮಾರಾಟ ಮಾಡುತ್ತಿದ್ದಾರೆ. ಸರ್ಕಾರಗಳೇ ಅನುಮತಿ ನೀಡಿವೆ ಎಂದು ಹೇಳಲಾಗಿದೆ.
ಆದರೆ, ಹೆಚ್ಚಾಗಿ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ, ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೊಂದರೆ ಆಗಿದೆ. ಇದರ ರಾಸಾಯನಿಕ ಪದಾರ್ಥಗಳಿಂದ ಸುತ್ತಲೂ ಇರುವ ಗಿಡಗಳು ಸುಟ್ಟು ಕರಕಲಾಗಿವೆ. ಕೂಡಲೇ ಸ್ಫೋಟಕ ವಸ್ತುಗಳ ಶೇಖರಣಾ ಘಟಕ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಪಂ ಸದಸ್ಯ ವೆಂಕಟೇಶ್ ಮಾತನಾಡಿ,'ಅಕ್ರಮವಾಗಿ ಸ್ಫೋಟಕ ವಸ್ತುಗಳ ಶೇಖರಣೆ ಮತ್ತು ಮಾರಾಟ ಮಾಡುತ್ತಿದ್ದಾರೆ. ಶಿವಮೊಗ್ಗದ ಹುಣಸೋಡಿನಲ್ಲಿ ಸ್ಫೋಟಕ ವಸ್ತುಗಳು ಸಿಡಿದು ಅಮಾಯಕರು ಪ್ರಾಣ ಕಳೆದುಕೊಂಡ ತಿಂಗಳಲ್ಲೇ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿ ಬಳಿ ಸಹ ಸ್ಫೋಟಕಗಳು ಸಿಡಿದು 6 ಮಂದಿ ಬಲಿಯಾಗಿದ್ದಾರೆ.
ಇಂತಹ ಘಟನೆಗಳಿಂದ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಲ್ಲುಕ್ವಾರಿಗಳಲ್ಲಿ ಸ್ಫೋಟದ ವಸ್ತುಗಳನ್ನು ಸಿಡಿಸಲು ಜಿಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ಇಡೀ ರಾತ್ರಿಯೆಲ್ಲ ಗ್ರಾಮಸ್ಥರು ಜಾಗರಣೆ ಮಾಡುವಂತಾಗಿದೆ. ಸಾಗಾಟದ ಸಂದರ್ಭದಲ್ಲಿ ಅನಾಹುತಗಳಿಗೆ ಯಾರು ಕಾರಣ' ಎಂದು ಪ್ರಶ್ನಿಸಿದರು.
ಗ್ರಾಮದ ಮುಖಂಡ ಕೃಷ್ಣಪ್ಪ ಮಾತನಾಡಿ, 'ಇಲ್ಲಿನ ಜಿಲೆಟಿನ್ ಶೇಖರಣಾ ಘಟಕದಿಂದ ಆಯತಪ್ಪಿ ಸಿಡಿದರೆ ಸುತ್ತಮುತ್ತಲಿನ ಗ್ರಾಮಗಳು ಅಲ್ಲದೇ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದವರಿಗೂ ಹರಡುವ ಸಾಧ್ಯತೆಗಳು ಇದೆ. ಶೇಖರಣಾ ಘಟಕವನ್ನು ಬೇರೆಗೆ ವರ್ಗಾಯಿಸಬೇಕು. ಜಿಲ್ಲಾಧಿಕಾರಿ, ಪೊಲೀಸ್ ಹಿರಿಯ ಅಧಿಕಾರಿಗಳು ಗಮನಹರಿಸಿ, ಸ್ಥಳ ಪರಿಶೀಲನೆ ಮಾಡಬೇಕು. ಜಿಲೆಟಿನ್ ಘಟಕವನ್ನು ರದ್ದುಪಡಿಸಬೇಕು' ಎಂದರು.
ಪುಟ್ಟಪರ್ತಿ ಗ್ರಾಮಕ್ಕೆ ತಹಶೀಲ್ದಾರ್ ಡಿ.ವಿ.ದಿವಾಕರ್ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಅಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಲಾಗಿದೆ. ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು. ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲೆಟಿನ್ ಕಟ್ಟಡ ತೆರವು ಮಾಡುವವರಿಗೂ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.