ಚಿಕ್ಕಬಳ್ಳಾಪುರ: ಜನಭಿಪ್ರಾಯವಿಲ್ಲದೆ ಏಕಾಏಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಸರ್ಕಾರದ ನಿರ್ಧಾರದ ವಿರುದ್ದ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಜೆ. ಕಾಂತ್ ರಾಜ್ ಮಾತನಾಡಿ, ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರೆ ತೊಂಡೆಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಗ್ರಾಮಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ. ಗೌರಿಬಿದನೂರು ತಾಲೂಕಿನಿಂದ ಇಲ್ಲಿಗೆ ಬರಲು ಬಸ್ ಸಂಪರ್ಕವಿದ್ದು, ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ ಬರಲು ಸುಲಭ ಮಾರ್ಗ ಇದಾಗಿದೆ. ಆದರೆ ಕೆಲ ರಾಜಕೀಯ ವ್ಯಕ್ತಿಗಳ ಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀಧರ್ ರೆಡ್ಡಿ ಮಾತನಾಡಿ, ಅನಾದಿ ಕಾಲದಿಂದಲೂ ಇಲ್ಲಿನ ಜನ ಗೌರಿಬಿದನೂರು ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ. ಜೊತೆಗೆ ಮಿನಿ ವಿಧಾನಸೌಧ ಸಹ ನಿರ್ಮಾಣವಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ಘೋಷಣೆ ಮಾಡಿದ ತಾಲೂಕನ್ನು ಕೂಡಲೇ ಕೈಬಿಡದಿದ್ದರೆ ನವೆಂಬರ್ 5ರಂದು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್. ಶ್ರೀನಿವಾಸ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಪಿ ಕೃಷ್ಣಮೂರ್ತಿ, ರಫೀಕ್, ಕೆ.ಎನ್. ಶಿವರೆಡ್ಡಿ, ಪಿ.ಎನ್. ಶಿವಶಂಕರರೆಡ್ಡಿ, ವೆಂಕಟೇಶ್ ರೆಡ್ಡಿ ,ರಾಮಚಂದ್ರಪ್ಪ, ಶಂಕರರೆಡ್ಡಿ, ಭಾಸ್ಕರ್ ರೆಡ್ಡಿ, ಟಿ.ವಿ. ರಾಮಣ್ಣ, ನಾಗರಾಜು, ಕಿಟ್ಟಿ, ಶ್ರೀನಿವಾಸಗೌಡ, ಅಶ್ವತ್ಥ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.