ಚಿಕ್ಕಬಳ್ಳಾಪುರ: ಈಗಾಗಲೇ ಬಾಗೇಪಲ್ಲಿ ತಾಲೂಕಿನ ಜೊತೆ ತಾಲೂಕಾಗಿ ಕಾರ್ಯನಿರ್ವಹಿಸುತ್ತಿರುವ ಗುಡಿಬಂಡೆ ಪಟ್ಟಣವನ್ನು ಈಗ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಪಟ್ಟಣದ ಜನತೆ ಪಟ್ಟುಹಿಡಿದ್ದಿದ್ದಾರೆ.
ಸದ್ಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದೊಂದಿಗೆ ಗುಡಿಬಂಡೆ ಪಟ್ಟಣವನ್ನು ತಾಲೂಕಾಗಿ ಸೇರಿಸಿದ್ದಾರೆ. ಆದರೆ, ಈ ಎರಡು ತಾಲೂಕುಗಳಿಗೆ ಒಬ್ಬರೇ ಶಾಸಕರು ಇದ್ದು, ಆಯ್ಕೆಯಾದ ಶಾಸಕರು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ತುಪ್ಪ ಹಚ್ಚುತ್ತಿದ್ದಾರೆ. ಬಾಗೇಪಲ್ಲಿಗೆ ಬೇಕಾದ ಅನುದಾನವನ್ನು ನೀಡಿ ಗುಡಿಬಂಡೆಯನ್ನು ಅಭಿವೃದ್ಧಿಯಿಂದ ದೂರ ಮಾಡುತ್ತಿದ್ದಾರೆ ಎಂದು ಗುಡಿಬಂಡೆಯ ಜನತೆ ದೂರಿದ್ದಾರೆ.
ಇನ್ನು ಈ ಹಿಂದೆ ಗುಡಿಬಂಡೆ ತಾಲೂಕಿಗೆ ಸಾಕಷ್ಟು ಭರವಸೆಗಳನ್ನು ನೀಡಿ ಸರ್ಕಾರವು ಸಹ ವಿಫಲವಾಗಿದೆ. ಗುಡಿಬಂಡೆ ಹಿಂದುಳಿದ ಪಟ್ಟಣವಾದ್ದರಿಂದ ಅಭಿವೃದ್ಧಿಯಲ್ಲಿ ಸಾಕಷ್ಟು ಹಿನ್ನಡೆ ಕಂಡಿದೆ. ಇದರಿಂದ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲು ಸಾರ್ವಜನಿಕರು ಹೋರಾಟ ಶುರು ಮಾಡಿದ್ದಾರೆ.
ಸದ್ಯ ಇದೇ ವಿಚಾರವಾಗಿ ಶಾಸಕ ಸುಬ್ಬಾರೆಡ್ಡಿ ಮಾತಾನಾಡಿ, ಎರಡು ತಾಲೂಕುಗಳು ನನಗೆ ಎರಡು ಕಣ್ಣುಗಳಿದ್ದಂತೆ. ಬಂದ ಅನುದಾನವನ್ನು ಸಮಾನವಾಗಿ ಹಂಚುತ್ತಿರುವೆ. ಗುಡಿಬಂಡೆಯ ಪ್ರತ್ಯೇಕ ವಿಧಾನಸಭೆಯ ಕೂಗನ್ನು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ.