ಬಾಗೇಪಲ್ಲಿ: ದ್ವಿಚಕ್ರ ವಾಹನವೊಂದು ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳ್ಳೂರು - ಆಕುಳೋಳ್ಳಪಲ್ಲಿ ಗ್ರಾಮಗಳ ನಡುವೆ ಸಂಭವಿಸಿದೆ.
ತಾಲೂಕಿನ ಗೊರ್ತಪಲ್ಲಿ ಪಂಚಾಯತಿಯ ಡಿ.ಕೊತ್ತಪಲ್ಲಿ ಗ್ರಾಮದ ಗೋಪಾಲ (50) ಮೃತಪಟ್ಟ ಹಿಂಬದಿ ಬೈಕ್ ಸವಾರ. ಮತ್ತು ಅದೇ ಗ್ರಾಮದ ಸವಾರ ಶಂಕರಪ್ಪ (50) ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋಪಾಲ ಮತ್ತು ಶಂಕರಪ್ಪ ನಿನ್ನೆ ಸಂಜೆ ಬಿಳ್ಳೂರಿನಿಂದ ತಮ್ಮ ಸ್ವಗ್ರಾಮ ಡಿ.ಕೊತ್ತಪಲ್ಲಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಆಕುಳೋಳ್ಳಪಲ್ಲಿ ಸಮೀಪದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಹಿಂಬದಿ ಸವಾರ ಗೋಪಾಲ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.