ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಕಾಶಪುರದಲ್ಲಿ ಗರ್ಭಿಣಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ದುಗ್ಗಿನಾಯಕನಪಲ್ಲಿ ಗ್ರಾಮದ ಪವಿತ್ರ (20) ಎಂದು ಗುರುತಿಸಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇವರು ಕಾಶಪುರ ಗ್ರಾಮದ ನಿವಾಸಿ ಮಧು ಎಂಬುವರನ್ನು ವಿವಾಹವಾಗಿದ್ದರು.
ಮದುವೆ ಸಮಯದಲ್ಲಿ ಮಧು ಹಾಗೂ ತಾಯಿ ವರಲಕ್ಷ್ಮಿ ಅವರು ಪವಿತ್ರಳನ್ನು ವಿವಾಹ ಮಾಡಿಕೊಟ್ರೆ ಸಾಕು ಎಂದಿದ್ದರು. ಅದರಂತೆ ನಮ್ಮ ಮಗಳನ್ನು ಮದುವೆ ಮಾಡಿಕೊಟ್ಟಿದ್ದೇವೆ. ನಾಲ್ಕು ತಿಂಗಳ ಬಳಿಕ ಪವಿತ್ರ ಗರ್ಭಿಣಿ ಆದ ವಿಷಯ ಖಚಿತಪಡಿಸಿಕೊಂಡ ಬಳಿಕ ಗಂಡ ಹಾಗೂ ಅವರ ಅತ್ತೆ ಸೇರಿ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಮಗಳು ಹೇಳಿದ್ದಳು.
ಮದುವೆ ಸಮಯದಲ್ಲಿ ವರದಕ್ಷಿಣೆ ಬೇಡ ಎಂದು ಈಗ ಕಿರುಕುಳ ನೀಡುವುದು ಸರಿಯಲ್ಲ ಎಂದು ಗಂಡ ಮತ್ತು ಅತ್ತೆಗೆ ನಾವು ಬುದ್ದಿ ಮಾತುಗಳನ್ನು ಹೇಳಿದ್ದೆವು. ಆದ್ರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಮಗಳಿಗೆ ಮತ್ತೆ ಕಿರುಕುಳ ನೀಡುತ್ತಿದ್ದರು.
ಈಗ ಮಗಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸುತ್ತಿದ್ದಾರೆ ಎಂದು ಪವಿತ್ರ ಪೋಷಕರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಘಟನೆ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.