ಚಿಂತಾಮಣಿ: ದರ್ಗಾ ಗಂಧೋತ್ಸವ ಕಾರ್ಯಕ್ರಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರಾಜ್ಯ ವರ್ಕ್ಫ್ ಮಂಡಳಿ ವಿರುದ್ದ ಜಿಲ್ಲಾ ವರ್ಕ್ಪ್ ಮಂಡಳಿ ಸದಸ್ಯ ಗರಂ ಆಗಿರುವ ಘಟನೆ ನಡೆದಿದೆ.
ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ಮುರುಗಮಲ್ಲಾ ಗ್ರಾಮದ ಅಮ್ಮಾಜಾನ್ ಹಾಗೂ ಬಾವಾಜಾನ್ ದರ್ಗಾದ ಗಂಧೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ, ಕೊರೊನಾ ಸೊಂಕು ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇನ್ನು ದರ್ಗಾ ಗಂಧೋತ್ಸವ ಕಾರ್ಯಕ್ರಮಕ್ಕೆ ಡಾ.ಸೈಯದ್ ಸೂಫಿಯಾನ್ ಅವರನ್ನು ಮೇಲ್ವಿಚಾರಕರನ್ನಾಗಿ ರಾಜ್ಯ ವಕ್ಫ್ ಮಂಡಳಿ ನೇಮಿಸಿದೆ. ಉರುಸ್ ಸಿದ್ಧತೆಗಳನ್ನು ನೋಡಿಕೊಳ್ಳದೇ ದರ್ಗಾಗೆ ಬರುವ ಭಕ್ತಾಧಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸದೇ ಕಾಟಾಚಾರಕ್ಕೆ ನೇಮಕ ಆಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಇಮ್ತಿಯಾಜ್ ಪಾಷಾ ಗರಂ ಆಗಿದ್ದರು.
ಮೊದಲನೇ ದಿನದ ಗಂಧೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದರ್ಗಾ ಮೇಲ್ವಿಚಾರಕರಾಗಿ ಆಯ್ಕೆಗೊಂಡ ನಂತರ ಗಂಧೋತ್ಸವದ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸುವ ಜವಾಬ್ದಾರಿ ಮೇಲ್ವಿಚಾರಕರ ಮೇಲೆ ಇರುತ್ತದೆ. ಆದರೆ, ದರ್ಗಾ ಬಳಿ ಗಂಧೋತ್ಸವ ನಡೆಯುತ್ತಿದ್ದರೆ ಮೇಲ್ವಿಚಾರಕರು ನಾಪತ್ತೆಯಾಗಿದ್ದಾರೆ ಎಂದು ದೂರಿದರು.