ಚಿಕ್ಕಬಳ್ಳಾಪುರ: ಹಿರಿಯ ನಾಯಕರಾದ ಲಕ್ಷ್ಮಣ್ ಸವದಿಯವರು ಪಕ್ಷ ಬಿಟ್ಟಿದ್ದು ನನ್ನ ಮನಸ್ಸಿಗೆ ಘಾಸಿ ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರದಲ್ಲಿಂದು ನಡೆದ ಕುರುಬ ಸಮುದಾಯದ ಸಭೆ ಬಳಿಕ ಮಾತನಾಡಿದ ಅವರು, ಸವದಿ ಅವರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.
ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿರುವುದರಿಂದ ಬೇಸರ ಮಾಡಿಕೊಂಡಿದ್ದಾರೆ ಎಂದು ನನಗೆ ಅರ್ಥವಾಗಿದೆ. ಒಂದು ದಿನ ಸಮಾಧಾನವಾಗಿ ಆಲೋಚನೆ ಮಾಡಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಜೊತೆ ಮಾತನಾಡಿ ಒಳ್ಳೆಯ ತೀರ್ಮಾನವನ್ನು ತೆಗೆದುಕೊಂಡು ಪಕ್ಷದಲ್ಲಿ ಉಳಿದರೆ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ನಾನು ಭಾವಿಸಿದ್ದೀನಿ. ವೈಯಕ್ತಿಕವಾಗಿ ಸವದಿಯವರು ಅತ್ಯಂತ ಆತ್ಮೀಯರು. ಅವರ ನಿರ್ಧಾರ ನನ್ನಲ್ಲಿ ಬೇಸರ ಮೂಡಿಸಿದೆ ಎಂದು ಹೇಳಿದರು.
ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕುರುಬ ಸಮುದಾಯದ ಮುಖಂಡರು ಆರೋಗ್ಯ ಸಚಿವರ ವಿರುದ್ಧ ಕಿಡಿಕಾರಿದ್ದರು. ಕುರುಬ ಸಮುದಾಯದ ಭವನ ಕಟ್ಟಲು ಒಂದು ಎಕರೆ ಜಮೀನು ಮಂಜೂರು ಮಾಡಿಸುವುದಾಗಿ ಸುಧಾಕರ್ ಭರವಸೆ ನೀಡಿದ್ದರು. ಆದರೆ ಇದುವರೆಗೂ ಜಮೀನು ಮಂಜೂರು ಮಾಡಿಸಿಲ್ಲ ಎಂದು ದೂರಿದ್ದರು.
ಇದಾದ ಬೆನ್ನಲ್ಲೇ ಡಾ.ಕೆ ಸುಧಾಕರ್ ಇಂದು ಕುರುಬ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿ ಈ ಬಾರಿಯೂ ನಾವು ಅಧಿಕಾರಕ್ಕೆ ಬರುತ್ತೇವೆ. ನಿಮಗೆ ಕೊಟ್ಟ ಭರವಸೆ ಈಡೇರಿಸುತ್ತೇನೆ ಎಂದು ಹೇಳಿ ಸಮಾಜದ ಮುಖಂಡರನ್ನು ಸಮಾಧಾನಪಡಿಸಿದರು.
ಇದನ್ನೂ ಓದಿ: ಕಮಲ ತೊರೆದು ಕೈ ಹಿಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ