ಚಿಕ್ಕಬಳ್ಳಾಪುರ: ಬಾಯಿ ಚಪಲಕ್ಕೆ ಏನೋ ಒಂದು ಮಾತಾಡೋದಲ್ಲ, ಒಂದು ತಿಂಗಳ ದವಸ ಧಾನ್ಯಗಳನ್ನು ರಾಜ್ಯಕ್ಕೆ ಕೊಡಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತಾನಾಡಿದ ಸಚಿವರು, ಅವರೊಬ್ಬರಿಗೆ ಹೃದಯ ಇದೆಯಾ? ಯಡಿಯೂರಪ್ಪನವರಿಗೆ ಇಲ್ಲವಾ? ಹೃದಯ ಇಲ್ದೆ ಇದ್ದಿದ್ರೆ ಹೋಗ್ತಿರೋ ಎಲ್ರಿಗೂ ಫ್ರೀಯಾಗಿ ಕಳಿಸ್ತಿದ್ರಾ? ಉಚಿತ ಊಟ, ಅಡುಗೆ ಸಾಮಗ್ರಿ, ವಸತಿ, 3 ತಿಂಗಳ ಸಂಬಳ, 5 ಸಾವಿರ ರೂ. ನೀಡಿದ್ದು ಯಾರು? ಶ್ರೀಮತಿ ಸೋನಿಯಾ ಗಾಂಧಿ ಕೊಟ್ರಾ? ಪ್ರತಿಪಕ್ಷದ ಅಧ್ಯಕ್ಷರಾಗಿ ಏನೋ ಒಂದು ಹೇಳ್ಬೇಕು ಹೇಳ್ತಾನೇ ಇರ್ತಾರೆ. ಹೇಳಿಕೆಗಳಿಗೂ ಒಂದು ಮಿತಿ ಬೇಡ್ವಾ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಗರಂ ಆದರು.
ಅಷ್ಟು ಹೃದಯವಂತಿಕೆ ಇದ್ರೆ ಕಾಂಗ್ರೆಸ್ನಿಂದ ರಾಜ್ಯದ ಜನರಿಗೆ ಒಂದು ತಿಂಗಳುಗಳ ಕಾಲ ಸಾಮಗ್ರಿಗಳನ್ನು ಕೊಡಲಿ, ಅದನ್ನು ನಾನು ಸ್ವಾಗತ ಮಾಡುವೆ ಎಂದು ಡಿ.ಕೆ. ಶಿವಕುಮಾರ್ಗೆ ಸಚಿವರು ಚಾಲೆಂಜ್ ಹಾಕಿದರು.
ಕೊರೊನಾ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ. ಸುಧಾಕರ್, ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಕರಣ ದಾಖಲಾಗಿವೆ. ಇದರಲ್ಲಿ ಮಂಡ್ಯ, ರಾಯಚೂರು, ಯಾದಗಿರಿ, ಗದಗ ಸೇರಿದಂತೆ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರು.
ಒಟ್ಟು 598 ಗುಣಮುಖರಾಗಿದ್ದು, 42 ಜನ ನಿಧನ ಹೊಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಕೊರೊನಾ ಲಿಸ್ಟ್ನಲ್ಲಿ ತೋರಿಸುತ್ತಿಲ್ಲ. ನಾವು ಎಲ್ಲವನ್ನೂ ಸರಿಯಾದ ಅಂಕಿ - ಅಂಶಗಳನ್ನು ನೀಡುವುದರಿಂದ ಸಾವಿನ ಸಂಖ್ಯೆ ಹೆಚ್ಚು ಕಾಣಿಸುತ್ತದೆ. ಇಂದು 32 ವರ್ಷದ ವ್ಯಕ್ತಿಗೆ ಟಿ.ಬಿ, ಏಡ್ಸ್ ಇತ್ತು, ಅದರಿಂದಾಗಿ ಮೃತಪಟ್ಟರು.
ಲಾಕ್ಡೌನ್ ಫ್ರೀ ಮಾಡಿದೀವಿ ಅಂದ್ರೆ ಯದ್ವಾ ತದ್ವಾ ಒಡಾಡಿ ಅಂತಲ್ಲ. ಕೆಲವು ಅಭ್ಯಾಸ ರೂಢಿಸಿಕೊಳ್ಳಿ, ಕಾನೂನು ಸಂಸ್ಕಾರ, ಸಂಸ್ಕೃತಿ ಆಗಬೇಕು. ಎಲ್ಲದಕ್ಕೂ ಕಾನೂನು ರೂಪಿಸಿ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.