ಚಿಕ್ಕಬಳ್ಳಾಪುರ : ಸಚಿವರಾಗಿ ನಾವೇ 500 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿಲ್ಲ. ಇನ್ನು ಡಿಕೆಶಿ ಏನ್ ಸ್ಪೆಷಲ್ಲಾ?, ಬೇಕಾದ್ರೆ ಕೊರೊನಾ ಮುಗಿದ ಬಳಿಕ ಕೆಪಿಸಿಸಿ ಸ್ಥಾನಕ್ಕೆ ಪದಗ್ರಹಣ ಮಾಡಿಕೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಅತಿ ಹೆಚ್ಚು ಹರಡುವ ಸಾಧ್ಯತೆ ಇದೆ. ನಿಜವಾದ ಸ್ಪೈಕ್ ಜುಲೈ ನಲ್ಲಿ ಬರುತ್ತೆ ಎಂದು ಪರಿಣಿತರು ಹೇಳಿದ್ದಾರೆ. ವಿದೇಶಗಳಲ್ಲಿ ಒಂದೆರಡು ತಿಂಗಳಲ್ಲೇ ಸ್ಪೈಕ್ ಬಂದಿತ್ತು ಎಂದರು
ಇನ್ನು ರಾಜ್ಯದಲ್ಲಿ 70ಕ್ಕೂ ಹೆಚ್ಚು ಲ್ಯಾಬ್ ಗಳನ್ನ ಸ್ಥಾಪಿಸಲಾಗಿದೆ. ನಾಲ್ಕು ಲಕ್ಷ ಕೊರೊನಾ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಅದೇ ರೀತಿ, 8 ನೇ ತಾರೀಖಿನ ನಂತರ ಲಾಕ್ಡೌನ್ ಮುಕ್ತ ಮಾಡಿದ್ದೇವೆ. ಆದರೆ, ಲಾಕ್ಡೌನ್ ಮುಕ್ತ ಮಾಡಿದಾಕ್ಷಣ ಕೊರೊನಾ ಮುಕ್ತ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕೆಪಿಸಿಸಿ ಅಧ್ಯಕ್ಷ ಪದಗ್ರಹಣಕ್ಕೆ ಸರ್ಕಾರ ಅನುಮತಿ ಕೊಡುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರಕ್ಕೂ ಸರ್ಕಾರಕ್ಕೂ ಏನೂ ಸಂಬಂಧ ಇಲ್ಲ. ನಾವೇ ಮಂತ್ರಿಗಳಾಗಿ ಇದುವರೆಗೂ 500 ಜನ ಸೇರಿಸಿ ಒಂದು ಸಭೆ ಮಾಡಲಿಲ್ಲ. ಡಿಕೆಶಿ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿರುವುದನ್ನ ನೋಡಿದ್ದೇನೆ. ಸಾವಿರಾರು ಜನರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದಾರೆ. ಒಳ್ಳೆಯದೇ ಮಾಡಲಿ, ಬೇಕಾದರೆ ಕೋವಿಡ್ ಸೋಂಕು ಮುಗಿದ ನಂತರ ಮಾಡಿಕೊಳ್ಳಲಿ ಎಂದರು.
ಬಳಿಕ ಮಾತನಾಡಿದ ಸಚಿವ ಎಸ್ ಟಿ. ಸೋಮಶೇಖರ್ ಉಪಚುನಾವಣೆಯಲ್ಲಿ ಸೋತ ನಾಲ್ಕೂ ಜನರನ್ನು ಎಂಎಲ್ಸಿ ಮಾಡಬೇಕು. ರೋಷನ್ ಬೇಗ್, ಪ್ರತಾಪ್ಗೌಡ ಪಾಟೀಲ್, ಮುನಿರತ್ನ, ಎಂಟಿಬಿ ನಾಗರಾಜ್‌ಗೆ ನ್ಯಾಯ ಕೊಡಬೇಕು. ನಮ್ಮ ಜೊತೆಯಲ್ಲಿ ಬಂದವರಿಗೆ ಎಂಎಲ್ಸಿ ಮಾಡಬೇಕಾಗಿದೆ. ಮುನಿರತ್ನ, ಪ್ರತಾಪ್ಗೌಡ ಪಾಟೀಲ್ ಅವರ ಕೇಸ್ ಕೋರ್ಟ್ನಲ್ಲಿತ್ತು. ಮುನಿರತ್ನ ಅವರ ಕೇಸ್ ಕ್ಲಿಯರ್ ಆಗಿದೆ. ಪ್ರತಾಪ್ಗೌಡ ಪಾಟೀಲ್ ಅವರ ಕೇಸ್ ಇನ್ನೂ ಬಾಕಿ ಇದೆ. ಅವರಿಬ್ಬರೂ ಚುನಾವಣೆಗೆ ಸ್ಪರ್ಧಿಸುತ್ತಾರೆ. 4 ಜನರಿಗೆ ಎಂಎಲ್ಸಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವ ವೇಳೆ ಸಚಿವ ಸೋಮಶೇಖರ್ , ವೈದ್ಯಕೀಯ ಸಚಿವರನ್ನು ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ಅವರನ್ನು ನಾವು ಮಾತನಾಡಿಸಲು ಭಯಪಡುತ್ತೇವೆ, ಆದರೆ ಸುಧಾಕರ್ ಧೈರ್ಯವಾಗಿಯೇ ಮಾತನಾಡುತ್ತಾರೆ. ಇನ್ನು ಕೋವಿಡ್ ವಿಚಾರದಲ್ಲಿ ಸುಧಾಕರ್ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.