ಚಿಕ್ಕಬಳ್ಳಾಪುರ: ಕಳೆದ ಎರಡು ದಿನಗಳ ಹಿಂದಷ್ಟೇ ಗೌರಿಬಿದನೂರು ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಕೆರೆಗಳಿಗೆ ನೀರು ತುಂಬಿಕೊಂಡಿತ್ತು. ಇಲ್ಲಿನ ಹುಲಿಕುಂಟೆ ಗ್ರಾಮದಲ್ಲಿ ಮಳೆ ನೀರಿಗೆ ಕೆರೆ ತುಂಬಿದ ಪರಿಣಾಮ ಬಾಲಕಿಯ ಶವವೊಂದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿಕೊಂಡಿತ್ತು.
ಈ ಬೆನ್ನಲ್ಲೇ ಕಾರ್ಯೋನ್ಮುಖರಾದ ಎಸ್ಪಿ ಮಿಥುನ್ ಕುಮಾರ್, ಗೌರಿಬಿದನೂರು ಠಾಣೆಯ ಸಿಪಿಐ ರವಿ ಹಾಗೂ ಪಿಎಸ್ಐ ಮೋಹನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಮಿಸ್ಸಿಂಗ್ ಕೇಸ್ ಆಧಾರದಲ್ಲಿ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿದ್ದು, ನೆರೆಯ ಹಿಂದೂಪುರಕ್ಕೆ ಧಾವಿಸಿ ಕಳೆದ 2019ನೇ ವರ್ಷದ ಮಿಸ್ಸಿಂಗ್ ಕೇಸ್ ಕೈಗೆತ್ತಿಕೊಂಡು ಬಾಲಕಿಯ ಪೋಷಕರನ್ನು ವಿಚಾರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯಲ್ಲಿ ಬಾಲಕಿಯನ್ನು ಹೆತ್ತ ತಾಯಿ ಹಾಗೂ ಅಕ್ಕ- ಭಾವ, ಸ್ವಂತ ಅಣ್ಣ ಸೇರಿದಂತೆ ಕುಟುಂಬಸ್ಥರೇ ಕೊಂದು ಕೆರೆಗೆ ಬಿಸಾಡಿ ಹೋಗಿದ್ದಾರೆ. ಬಾಲಕಿಯನ್ನು 17 ವರ್ಷದ ಸಂಧ್ಯಾ ಎಂದು ಪತ್ತೆ ಹಚ್ಚಲಾಗಿದ್ದು, ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದುಪೂರ ತಾಲೂಕಿನ ತುಮಕುಂಟೆ ಚೆಕ್ ಪೋಸ್ಟ್ ಬಳಿಯ ನಿವಾಸಿ ಎಂದು ತಿಳಿದು ಬಂದಿದೆ.
ಸಂಧ್ಯಾ ಹಾಗೂ ಹಿಂದೂಪುರ ಮೂಲದ ಶೇಖರ್ ಪರಸ್ಪರ ಪ್ರೀತಿಸುತ್ತಿದ್ದು, ಎರಡು ಬಾರಿ ಮನೆಯಿಂದ ಓಡಿ ಹೋಗಿ ಸಿಕ್ಕಿಹಾಕಿಕೊಂಡಿದ್ದರು. ಬಾಲಕಿಯನ್ನು ಮನವೋಲಿಸಲು ಪ್ರಯತ್ನಪಟ್ಟರಾದರೂ ಆಕೆ ಮತ್ತೆ ಮನೆಯಿಂದ ಓಡಿಹೋಗಿದ್ದಳು. ಈ ಹಿನ್ನೆಲೆಯಲ್ಲಿ ಮನೆಯವರೇ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಹಿಂದೂಪುರ ಪೊಲೀಸರು ಹೈದರಾಬಾದ್‌ನಲ್ಲಿದ್ದ ಇಬ್ಬರನ್ನೂ ಠಾಣೆಗೆ ಕರೆಸಿ, ರಾಜಿ ಮಾಡಿ ಮನೆಗೆ ಕಳುಹಿಸಿದ್ದಾರೆ. ಆದರೆ ಮೂರು ತಿಂಗಳ ನಂತರ ಮತ್ತೆ ಮನೆಯಿಂದ ಓಡಿ ಹೋಗಿದ್ದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಲಯದಲ್ಲಿ ಬಾಲಕಿ ನಮ್ಮ ಇಷ್ಟಾನುಸಾರವೇ ಓಡಿ ಹೋಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ನಂತರ ಬಾಲಕಿಗೆ ತುಮಕೂರು ಬಳಿ ವಿವಾಹ ಮಾಡಲು ಪ್ರಯತ್ನ ನಡೆಸಿದ್ದು ಬಾಲಕಿ ಪೋಷಕರ ಮಾತು ಕೇಳದ ಕಾರಣಕ್ಕೆ ಆಕೆಯ ತಾಯಿ, ಅಕ್ಕ-ಭಾವ (ಗೌರಿಬಿದನೂರು ತಾಲೂಕಿನ ರೆಡ್ಡಿದ್ಯಾವರಹಳ್ಳಿ ಗ್ರಾಮ) ಹಾಗೂ ಅಣ್ಣ ಸೇರಿ ಕೊಲೆ ಮಾಡಿ ಗೌರಿಬಿದನೂರು ತಾಲೂಕಿನ ಹುಲಿಕುಂಟೆಯ ಗ್ರಾಮದ ಕೆರೆಯಲ್ಲಿ ಮೃತದೇಹವನ್ನು ಎಸೆದು ಹೋಗಿದ್ದಾರೆ.
ಪ್ರಕರಣವನ್ನು ಭೇದಿಸಿದ ಸಿಪಿಐ ರವಿ ಹಾಗೂ ಪಿಎಸ್ಐ ಮೋಹನ್ ಅಪರಾಧ ವಿಭಾಗದ ಕಾನ್ಸ್ಟೇಬಲ್ಗಳಾದ ಅಶ್ವತ್ಥಪ್ಪ, ಶ್ರೀನಿವಾಸ ರೆಡ್ಡಿ, ಅರುಣ್ ಕುಮಾರ್ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸಿಬ್ಬಂದಿಗೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.