ಚಿಂತಾಮಣಿ (ಚಿಕ್ಕಬಳ್ಳಾಪುರ): ಸದಾಶಿವ ಆಯೋಗದ ವರದಿ ಜಾರಿಗೆ ತಂದು ಒಳಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಅಷ್ಟೇ ಅಲ್ಲದೆ, ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಮಾದಿಗ ದಂಡೋರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕೈವಾರ ಶ್ರೀಯೋಗಿ ನಾರಾಯಣ ಸ್ವಾಮಿ ಮಠದಲ್ಲಿ ಜಿಲ್ಲಾಧ್ಯಕ್ಷರಾದ ಎಂ.ವಿ.ರಾಮಪ್ಪ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಜಂಗಮಶೀಗೆಹಳ್ಳಿ ದೇವರಾಜ್ರವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯಿತು.
ದಲಿತರಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕಿದೆ. ಸರ್ಕಾರ ಕೂಡಲೇ ಬರುವ ಅಧಿವೇಶನದಲ್ಲಿ ಮಾದಿಗರಿಗೆ ಒಳಮೀಸಲು ಕಲ್ಪಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಾದಿಗ ದಂಡೋರ ವತಿಯಿಂದ ರಾಜ್ಯವ್ಯಾಪ್ತಿ ಹೋರಾಟ ನಡೆಸಲಾಗುವುದೆಂದು ರಾಜ್ಯಾಧ್ಯಕ್ಷರಾದ ಬಿ.ನರಸಪ್ಪ ದಂಡೋರ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಬಿ ನರಸಿಂಹ ಮಾತನಾಡಿ, ಮಾದಿಗರಿಗೆ ಒಳ ಮೀಸಲಾತಿ ಕಲ್ಪಿಸುವುದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ. ಆದರೆ ಒಳಮೀಸಲಾತಿ ಕಲ್ಪಿಸದೇ ಹೋದರೆ ಮಾದಿಗ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಆಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವುದು ಸಂವಿಧಾನದ ಮೂಲ ಆಶಯವಾಗಿದ್ದು ಇದನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಮುಂದಾಗಬೇಕೆಂದರು.