ಚಿಕ್ಕಬಳ್ಳಾಪುರ: ಬೆಳಗಾವಿಯಲ್ಲಿ ಇತ್ತೀಚೆಗೆ ಮಹಿಳೆ ಮೇಲೆ ಹಲ್ಲೆ ನಡೆಸಿ, ಮೆರವಣಿಗೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಜಿಲ್ಲೆಯ ದಪ್ಪರ್ತಿ ಗ್ರಾಮದ ಯುವಕ ಹಾಗೂ ಯುವತಿ ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದು, ಮನೆ ಬಿಟ್ಟು ಓಡಿಹೋಗಿ ಭಾನುವಾರ ಮದುವೆಯಾಗಿದ್ದಾರೆ. ಈ ಕಾರಣದಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಸೋಮವಾರ ಯುವಕನ ಪೋಷಕರ ಮನೆ ಮೇಲೆ ದಾಳಿ ನಡೆಸಿ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ದಪ್ಪರ್ತಿ ಗ್ರಾಮದ ಯುವಕ ಮತ್ತು ಯುವತಿ ಕಳೆದ ಭಾನುವಾರ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ. ಯುವತಿ ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಕುಟುಂಬಸ್ಥರು ಕೋಪಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಯುವತಿ ಕುಟುಂಬಸ್ಥರು ಯುವಕನ ಮನೆಯ ಮೇಲೆ ದಾಳಿ ಮಾಡಿ, ಯುವಕನ ತಾಯಿ ಹಾಗೂ ತಂದೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗಾಯಾಳುಗಳಿಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವಕ ಯುವತಿ ಪರಾರಿಯಾಗಲು ಯುವಕನ ಪೋಷಕರು ಬೆಂಬಲ ನೀಡಿದ್ದಾರೆ ಎಂಬ ಆಕ್ರೋಶದಲ್ಲಿ ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಕೂಡಾ ದಾಖಲಾಗಿದೆ.
ಇದನ್ನೂ ಓದಿ: ಮಗನ 'ಪ್ರೀತಿ', ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ