ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಹೆಬ್ಬರಿ ಮಜರಾ ಕುರುಪ್ಪಲ್ಲಿ ಗ್ರಾಮದ ಸರ್ವೆ ನಂ.196ರಲ್ಲಿ 153 ಎಕರೆ 31 ಗುಂಟೆ ವಿಸ್ತೀರ್ಣವುಳ್ಳ ಕೆರೆಯು ಒತ್ತುವರಿಯಾಗಿದೆಯೆಂದು ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದರ ಹಿನ್ನೆಲೆ ಕೆರೆ ಒತ್ತುವರಿ ತೆರವುಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಗ್ರಾಮದ ಕೆರೆ ಅಂಗಳದ ಒತ್ತುವರಿ ದೂರಿನಂತೆ ಜನವರಿ 12ರಂದು ಕಂದಾಯ ಅಧಿಕಾರಿಗಳು ಸರ್ವೆ ನಡೆಸಿ ಸರ್ವೆ ಕಾರ್ಯ ಅಪೂರ್ಣವಾಗಿದ್ದು, ಮತ್ತೆ ಶನಿವಾರ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಇಂದು ಮಧ್ಯಾಹ್ನ ಮತ್ತೆ ಪೊಲೀಸ್ ಬಂದೋಬಸ್ತ್‌ನಲ್ಲಿ ಅಧಿಕಾರಿಗಳು ಸರ್ವೆ ನಡೆಸಿದರು.
ಸರ್ವೆ ಕಾರ್ಯ ಮುಗಿದ ನಂತರ ಕಸಬಾ ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ಅಂಬರೀಷ್ ಮಾತನಾಡಿ, ಸರ್ವೆ ನಂಬರ್ 196ರಲ್ಲಿ ಕೆರೆಯ ಅಂಗಳವಿದ್ದು, ಅದು ಒತ್ತುವರಿಯಾಗಿರುವುದು ದಾಖಲೆಗಳ ಪ್ರಕಾರ ಖಾತ್ರಿಯಾಗಿದೆ. ಕೂಡಲೇ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಹಾಗೂ ಸರ್ವೆ ನಂಬರ್ 215 ಹಿಡುವಳಿದಾರರೇ ಕೆರೆಯ ಅಂಗಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ ಅವರು, ಕೆರೆಗೆ ಸಂಬಂಧಿಸಿದ ಗಡಿಗಳನ್ನು ಗುರ್ತಿಸಿದ್ದೇವೆ ಹಾಗೂ ಒತ್ತುವರಿಯಾಗಿರುವ ಪ್ರದೇಶವನ್ನು ಇಲಾಖೆಯ ವಶಕ್ಕೆ ಶಿಘ್ರವೇ ಪಡೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಸರ್ವೆ ನಂಬರ್ 215ರಲ್ಲಿ ಸ್ಮಶಾನವಿದ್ದು, ಸ್ಮಶಾನ ಒತ್ತುವರಿ ಮಾಡಿದ್ದಾರೆ ಎಂದು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದೆವು. ಸುಮಾರು ವರ್ಷಗಳಿಂದಲೂ ಅಲ್ಲಿ ಸ್ಮಶಾನವಿದ್ದು, ಇಂದಿನ ಸರ್ವೆ ಕಾರ್ಯದಲ್ಲಿ ಸ್ಮಶಾನದ ಜಮೀನು ಸರ್ವೆ ನಂಬರ್ನಲ್ಲಿ ಹೋಗಿರುವ ಕಾರಣಕ್ಕೆ ಕೂಡಲೇ ನಮಗೆ ಬೇರೆಡೆ ಸ್ಮಶಾನವನ್ನು ಗುರ್ತಿಸಿಕೊಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.