ಚಿಕ್ಕಬಳ್ಳಾಪುರ: ಸಮಾಜ ಸೇವೆ ಮಾಡಬೇಕೆಂಬ ಸದುದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಕೆ ಸುಧಾಕರ್ ತಿಳಿಸಿದರು.
ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬೆಂಬಲಿಗರು ಆಯೋಜಿಸಿದ್ದ ನಮ್ಮ ನಡೆ ಸುಧಾಕರ್ ಕಡೆ, ಮತ್ತೊಮ್ಮೆ ಸುಧಾಕರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮೊದಲು ಬಾರಿಗೆ ಶಾಸಕನಾಗಿದ್ದಾಗ ಮಂಚೇನಹಳ್ಳಿ ಸಾಕಷ್ಟು ಆಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ನಂತರ 2ನೇ ಬಾರಿ ಶಾಸಕನಾಗಿ ಆಯ್ಕೆಯಾದಾಗ ಅನೈತಿಕ ಮೈತ್ರಿ ಸರ್ಕಾರದಿಂದ ಈ ಭಾಗಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡುವ ಗುರಿಯನ್ನು ಹೊಂದಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪ್ರಸಾವನೆ ಸಲ್ಲಿಸಿದ್ದೆ. ಆದರೆ ನಂತರ ಬಂದ ಮೈತ್ರಿ ಸರ್ಕಾರದಲ್ಲಿ ಮಂಚೇನಹಳ್ಳಿ ತಾಲೂಕು ಕೇಂದ್ರವಾಗಿ ಮಾಡಲು ಆಗಲಿಲ್ಲ ಕಾರಣ ಈ ಭಾಗದ ಮಾಜಿ ಕೃಷಿ ಸಚಿವ ಎನ್ ಹೆಚ್ ಶಿವಶಂಕರ ರೆಡ್ಡಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಅದನ್ನು ತಡೆದರು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಕೃಷಿ ಸಚಿವ ಎನ್. ಹೆಚ್ ಶಿವಶಂಕರ್ ರೆಡ್ಡಿ ಕೃಷಿ ಸಚಿವರಾಗಿದ್ದಾಗ ಇಸ್ರೇಲ್ಗೆ ಹೋಗಿ ಸುತ್ತಾಡಿಕೊಂಡು ಬಂದ್ರೆ ವಿನಃ ರಾಜ್ಯದಲ್ಲಿ ಕೃಷಿಕರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುವ ಕ್ರಮಗಳನ್ನು ಅನುಸರಿಸಲಿಲ್ಲ. ಹಾಗೂ ರೈತ ಪರವಾದ ಕೃಷಿ ಸಂಬಂಧಿಸಿದ ಕಾರ್ಯಗಳನ್ನು ಮಾಡಲಿಲ್ಲ. ಇಂತಹ ಕೃಷಿ ಸಚಿವರನ್ನು ಹಿಂದೆಂದೂ ರಾಜ್ಯ ಕಂಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಗೌರಿಬಿದನೂರಿನ ಜನತೆ ಈ ವ್ಯಕ್ತಿಯ ಅಭಿವೃದ್ಧಿ ಕಂಡು ಹಿಡಿಶಾಪ ಹಾಕುತ್ತಿದ್ದು, ಇಂತಹ ವ್ಯಕ್ತಿ ನನ್ನ ಅಭಿವೃದ್ಧಿ ಬಗ್ಗೆ ಪ್ರಶ್ನೇ ಮಾಡುತ್ತಿದ್ದು, ಹಾಗೂ ಸಚಿವ ಎನ್ ಹೆಚ್ ಶಿವಶಂಕರರೆಡ್ಡಿ ಯವರ ರಾಜಕೀಯ ಗುರುವಾಗಿದ್ದ ಮಾಜಿ ಶಾಸಕರಾದ ಅಶ್ವತ್ಥನಾರಾಯಣ ರೆಡ್ಡಿಯವರ ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಿದರಲ್ಲ. ಇತಂಹವರಿಂದ ನಾನು ಕಲಿಯಬೇಕಾಗಿಲ್ಲ ಎಂದು ಟಾಂಗ್ ನೀಡಿದರು.
ಕಾರ್ಯಕ್ರಮದಲ್ಲಿಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೇಶವ ರೆಡ್ಡಿ,ತಾಲೂಕು ಪಂಚಾಯ್ತಿ ಸದಸ್ಯ ಬಾಲಕೃಷ್ಣ,ಕೋಚಿಮಲ್ ಮಾಜಿ ನಿರ್ದೆಶಕ ಸುಬ್ಬರೆಡ್ಡಿ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ಶಿವಕುಮಾರ್, ನಾರಾಯಣಸ್ವಾಮಿ, ಮಹಿಳಾ ಮಖಂಡರಾದ ವೆಂಕಟಲಕ್ಷಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುದರ್ಶನರೆಡ್ಡಿ, ಮುಖಂಡರಾದ ಅಪ್ಟಿಗೌಡ,ನಾರಾಯಣಸ್ವಾಮಿ, ಮನೋಹರ್ ಹಾಗೂ ಇತರೆ ಮುಖಂಡರು ಹಾಜರಿದ್ದರು.