ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ಗೆ ಧೈರ್ಯ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಸ್ವತಂತ್ರವಾಗಿ ನನ್ನ ಎದರು ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆ ಎಂದು ನೋಡೋಣ ಎಂದು ಮಾಜಿ ಸಚಿವ ಕೆ ಸುಧಾಕರ್ ಸವಾಲು ಹಾಕಿದ್ದಾರೆ. ಹಾಲಿ ಶಾಸಕರ ಬೆಂಬಲಿಗರಿಂದ ಮಾಜಿ ಸಚಿವರ ಮುಖಂಡನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟಿಸಿ ಮಾಜಿ ಸಚಿವ ಸುಧಾಕರ್ ಎಸ್ಪಿ ಡಿ ಎಲ್ ಸಂತೋಷ್ ಅವರಿಗೆ ಇಂದು ದೂರು ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಸಕರು ಖಾಸಗಿ ಸಂಸ್ಥೆಯೊಂದರಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆಸಿದ್ದ ವಿಷಯವಾಗಿ ಬಿಜೆಪಿ ಮುಖಂಡ ಸಂತೋಷ್ ರಾಜು ಮಾಧ್ಯಮಗೋಷ್ಟಿ ನಡೆಸಿ, ಖಾಸಗಿ ಸಂಸ್ಥೆಯಲ್ಲಿ ತಾಲೂಕಿನ ಅಧಿಕಾರಿಗಳ ಸಭೆ ಮಾಡಿರುವುದು ಕಾನೂನು ಬಾಹಿರ. ಹೀಗಾಗಿ ಶಾಸಕರು ರಾಜೀನಾಮೆ ನೀಡಬೇಕು, ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡ ಸಂತೋಷ್ ರಾಜು ಅವರ ಅಂಗಡಿ ಬಳಿ ಹೋಗಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಹಾಡಹಗಲೇ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಅವರೊಂದಿಗೆ ನಾವಿದ್ದೇವೆ. ನಾವು ಸೋತಿದ್ದಿವಿ ಹೊರತು ಸತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ಅಥವಾ ಬೇರೆ ಯಾವ ಕ್ಷೇತ್ರದಲ್ಲಾದರೂ ಬಿಜೆಪಿ ಮುಖಂಡರಿಗೆ ಅನ್ಯಾಯವಾದರೇ ನಾವು ಸುಮ್ಮನಿರಲ್ಲಿ. ನಮ್ಮ ರಕ್ತ ಕೊಟ್ಟಾದರೂ ಅವರನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವರು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಹಿಂಬಾಲಕರಿಗೆ ಎಚ್ಚರಿಕೆ ರವಾನಿಸಿದರು.
ಚಿಕ್ಕಬಳ್ಳಾಪುರದ ಜನತೆಯ ಶಾಂತಿ, ನೆಮ್ಮದಿಗೆ ಭಂಗ ತರುವಂತಹ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದರು. ಏನಾದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದೆಕೊಳ್ಳದೇ ಹೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡುವುದಾಗಿಯೂ ಡಾ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಶಾಸಕ ಪ್ರದೀಪ್ ಈಶ್ವರ್ಗೆ ತಾಕತ್ ಇದ್ರೆ ರಾಜೀನಾಮೆ ಕೊಟ್ಟು ನಂತರ ನನ್ನ ವಿರುದ್ಧ ಚುನಾವಣೆಯಲ್ಲಿ ಗೆಲ್ಲಲಿ ಎಂದು ಸವಾಲನ್ನು ಸಹ ಹಾಕಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ಹಾಲಿ ಮಾಜಿ ಶಾಸಕರುಗಳ ಟಾಕ್ ವಾರ್ ನಿಂದ ಕಮ್ಮಿ ಆದ ನಂತರ ಅವರ ಹಿಂಬಾಲಕರ ಟಾಕ್ ವಾರ್ ಶುರುವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ ಬಿಡುಗಡೆ.. ರಾಜ್ಯಾಧ್ಯಕ್ಷ ಹೊಣೆ?