ಚಿಂತಾಮಣಿ: ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿಗಾಗಿ ಪ್ರತಿ ದಿನವೂ ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಮಳೆ ಕೊರತೆಯಿಂದಾಗಿ ತಾಲೂಕಿನ ಕೆರೆ, ಬಾವಿ ಬತ್ತಿ ಹೋಗಿವೆ. ಸಾವಿರಕ್ಕೂ ಅಧಿಕ ಅಡಿ ಕೊರೆದರು ನೀರು ಬರುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಪ್ಲೋರೈಡ್ ಮಿಶ್ರಿತ ನೀರು ಬರುತ್ತಿದೆ. ಇಂತಹ ನೀರಿನ ಸೇವನೆಯಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶವಂತಪುರ ಗ್ರಾಮದ ಜನರು ಕುಡಿಯುವ ನೀರಿಗಾಗಿ 8ರಿಂದ 10 ಕಿ.ಮೀ ದೂರ ನಡೆಯಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಅಧಿಕಾರಿಗಳ ವರ್ತನೆಗೆ ಬೇಸತ್ತ ಸ್ಥಳೀಯರು ಪಿಡಿಒ ಹಾಗೂ ಅಧ್ಯಕ್ಷರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.