ಚಿಕ್ಕಬಳ್ಳಾಪುರ: ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಸಾಲ ಮನ್ನಾ ಮಾಡಬಾರದೆಂದು ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ರು. ಎಲ್ಲಿ ಸಾಲ ಮನ್ನಾ ಮಾಡಿ ಕುಮಾರಸ್ವಾಮಿ ಹೆಸರು ಮಾಡ್ತಾರೆ ಅಂತಾ ಸಿದ್ದರಾಮಯ್ಯಗೆ ಹೊಟ್ಟೆ ಕಿಚ್ಚಿತ್ತು. ಇದೇ ವಿಚಾರವಾಗಿ ಯಡಿಯೂರಪ್ಪ ಹಾಗೂ ನಮ್ಮ ಎಂಎಲ್‌ಎಗಳ ಜತೆ ಕೈ ಜೋಡಿಸಿ ಮೈತ್ರಿ ಸರ್ಕಾರವನ್ನೇ ಮುಳುಗಿಸಿದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರತ್ನ ಯಾತ್ರೆ ಕಾರ್ತಿಕ ಮಾಸದಲ್ಲಿ ಮನೆಗೆ ಪ್ರವೇಶ ಮಾಡುತ್ತಿದೆ. ಪಂಚರತ್ನ ಯೋಜನೆಯನ್ನು ಐದು ವರ್ಷಗಳಲ್ಲಿ ಮಾಡದಿದ್ದರೆ ನಿಮ್ಮ ಬಳಿ ಬಂದು ಮತ್ತೊಮ್ಮೆ ಮತ ಕೇಳುವುದಿಲ್ಲ ಎನ್ನುವ ಸಂಕಲ್ಪ ಮಾಡಿದ್ದೇವೆ ಎಂದರು.
ಪಂಚರತ್ನ ಕುಮಾರಣ್ಣನ ಕನಸಿನ ಕೂಸೆಂದ ನಿಖಿಲ್: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನ.18ರಂದು ಕೋಲಾರದಿಂದ ಆರಂಭವಾದ ಕುಮಾರಣ್ಣನ ಕನಸಿನ ಕೂಸು 'ಪಂಚರತ್ನ ಯಾತ್ರೆ'ಯನ್ನು ಸಾವಿರಾರು ಜನ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು. ರಾಜ್ಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದೆ. ಈವರೆಗೂ ಅಧಿಕಾರ ನಡೆಸಿರುವುದು ಒಂದು ಕಾಂಗ್ರೆಸ್ ಮತ್ತೊಂದು ಕೋಮುವಾದಿ ಪಕ್ಷ ಬಿಜೆಪಿ. ಅವರು ಏನೂ ಮಾಡಲಿಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಲಾಟರಿ ನಿಷೇಧ, ಸಾರಾಯಿ ನಿಷೇಧ ಮಾಡಿದ್ರು. ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಅನೇಕರು ಟೀಕೆ ಮಾಡಿದ್ರು. ಪಕ್ಷ ಉಳಿಸುವ ನಿಟ್ಟಿನಲ್ಲಿ ಅಂದು ಅವರು ಸಿಎಂ ಆಗಬೇಕಾಯ್ತು ಎಂದರು.
'ರೈತರ ಸಂಕಷ್ಟಕ್ಕೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸಲ್ಲ': ಕೇವಲ ಕೋಲಾರ- ಚಿಕ್ಕಬಳ್ಳಾಪುರ ಭಾಗದಲ್ಲಿ ಹಸಿರು ಕಂಡರೆ ಸಾಲದು. ನಾಡಿನಾದ್ಯಂತ ಹಸಿರು ಕಾಣಬೇಕು. ರೈತರು ಸಂಕಷ್ಟ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾವುದೇ ರಾಷ್ಟ್ರೀಯ ಪಕ್ಷಗಳು ಬರಲಿಲ್ಲ. ಬಂದಿದ್ದು ಕುಮಾರಸ್ವಾಮಿ ಮಾತ್ರ. ಇಂದು ಪಂಚರತ್ನ ಎಲ್ಲಾ ಸಾರ್ವಜನಿಕರಿಗೆ ಅನುಕೂಲ ಆಗುವ ಕೆಲಸ ಮಾಡಲಾಗ್ತಿದೆ. ರೈತರ ಎಲ್ಲ ಸಮಸ್ಯೆ ಮತ್ತು ಸವಾಲುಗಳ ಪರಿಹಾರಕ್ಕೆ ಜೆಡಿಎಸ್ ಅಧಿಕಾರಕ್ಕೆ ತರಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಚುನಾವಣಾ ರಣಕಹಳೆ: ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಜೊತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಹೆಚ್ಡಿಕೆ