ಚಿಕ್ಕಬಳ್ಳಾಪುರ : ರಾಜ್ಯ 2023- ವಿಧಾನಸಭಾ ಸಾವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮದೇಯಾದ ತಂತ್ರಕಾರಿಕೆ ಮಾಡುತ್ತಿದ್ದು, ಎದುರಾಳಿಯನ್ನು ಕಟ್ಟಿ ಹಾಕಲು ತಯಾರಾಗಿವೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಸಚಿವ ಕೆ ಸುಧಾಕರ್ ಜೊತೆ ಜೆಡಿಎಸ್ ಅಭ್ಯರ್ಥಿ ಕೆ ಪಿ ಬಚ್ಚೇಗೌಡ ಡೀಲ್ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬುತ್ತಿದೆ. ಅಲ್ಲದೆ, ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆಯುತ್ತಿದೆ. ಇದರ ಬೆನ್ನಲ್ಲೇ ಇಂದು ಕೆ ಪಿ ಬಚ್ಚೇಗೌಡ ಅವರು ತುರ್ತು ಸುದ್ದಿಗೋಷ್ಟಿ ನಡೆಸಿದರು. ಮಾನ, ಮರ್ಯಾದೆ ಇದ್ದರೆ ನೇರವಾಗಿ ಚುನಾವಣೆಯಲ್ಲಿ ನಿಂತು ನನ್ನನ್ನು ಎದುರಿಸಿ ಎಂದು ಸುಧಾಕರ್ ವಿರುದ್ಧ ಕೆಂಡಾಮಂಡಲವಾದರು.
ಇದನ್ನೂ ಓದಿ : ಮೇಕೆದಾಟು ಯೋಜನೆ ಆಗಬೇಕಾದ್ರೆ ಅದು ಪ್ರಾದೇಶಿಕ ಪಾರ್ಟಿಯಿಂದ ಮಾತ್ರ ಸಾಧ್ಯ: ಹೆಚ್ ಡಿ ದೇವೇಗೌಡ
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಮಾಜಿ ಶಾಸಕ ಕೆ ಪಿ ಪಿಳ್ಳಪ್ಪನ ಮಗ. ನನ್ನ ಖರೀದಿ ಮಾಡೋದು ಹೋಗಲಿ, ನನ್ನ ಎಡಗಾಲು ಚಪ್ಪಲಿಯನ್ನು ಖರೀದಿ ಮಾಡಲು ಸಹ ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್ಗೆ ಟಾಂಗ್ ಕೊಟ್ಟಿದ್ದಾರೆ. ತಾಕತ್ತಿದ್ದರೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ, ಹಿಂದೆಯಿಂದ ಬೆನ್ನಿಗೆ ಚೂರಿ ಹಾಕುವುದಲ್ಲ, ನೀನು ಹಣ ಕೊಡಬೇಡ, ನಾನು ಹಣ ಕೊಡಲ್ಲ. ಯಾರು ಗೆಲ್ಲತ್ತಾರೆ ಅನ್ನೋದನ್ನು ನೋಡೋಣ. ವಾಮಮಾರ್ಗದ ಮೂಲಕ ನನ್ನ ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕರ್ನಾಟಕ ಚುನಾವಣೆ 2023: 2018ಕ್ಕೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ.. ADR ವರದಿ