ಚಿಂತಾಮಣಿ(ಚಿಕ್ಕಬಳ್ಳಾಪುರ): ನಗರದ ಸಾರ್ವಜನಿಕ ಆಸ್ಪತ್ರೆಯ ಬಳಿ ಕಳೆದ ಸುಮಾರು 20 ದಿನಗಳಿಂದ ಉಪಯೋಗಿಸಿದ ಪಿಪಿಇ ಕಿಟ್ ಸೇರಿದಂತೆ ಕೊರೊನಾ ಚಿಕಿತ್ಸಾ ಉಪಕರಣಗಳನ್ನು ಆಸ್ಪತ್ರೆಯ ಹಿಂಭಾಗ ಎಲ್ಲೆಂದರಲ್ಲಿ ಎಸೆಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಆಸ್ಪತ್ರೆಗೆ ಭೇಟಿ ನೀಡುವವರು ಭಯ ಭೀತರಾಗಿದ್ದಾರೆ.
ಇದರ ಪಕ್ಕದಲ್ಲೇ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದ್ದು ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳನ್ನು ಎತ್ತಿಕೊಂಡು ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಇವರಿಗೆ ಕೋವಿಡ್ ಹರಡುವಿಕೆಯ ಆತಂಕ ಹೆಚ್ಚಾಗಿದೆ. ಬಳಸಿದ ಪಿಪಿಒ ಕಿಟ್‌ಗಳ ನಿರ್ವಹಣೆ ಇಲ್ಲದೇ ಭಯದ ವಾತಾವರಣ ನಿರ್ಮಾಣವಾಗಿದೆ.
ಇಲ್ಲಿ ತಾಲೂಕು ವೈದ್ಯಾಧಿಕಾರಿಗಳ ಮತ್ತು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ವೈದ್ಯಕೀಯ ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ಪಿಪಿಇ ಕಿಟ್‌ಗಳ ಸಮರ್ಪಕ ನಿರ್ವಹಣೆ ಮಾಡಬೇಕಾಗಿದೆ.