ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ಮಂಜೂರು ಮಾಡಿಸಿಕೊಂಡು 30 ಲಕ್ಷ ರೂ. ಬೆಲೆ ಬಾಳುವ ಕೃಷಿ ಜಮೀನನ್ನು ಮತ್ತೊಬ್ಬರಿಗೆ ಪೌತಿಖಾತೆ ಮಾಡಿ ಅಕ್ರಮವಾಗಿ ಪರಭಾರೆ ಮಾಡಿರುವ ಘಟನೆ ತಾಲೂಕಿನ ಯಗವಬಂಡ್ಲಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯೋರ್ವ ರಿಯಲ್ ಎಸ್ಟೇಟ್ ಏಜೆಂಟರಿಗೆ ಕಡಿಮೆ ದರದಲ್ಲಿ ಜಮೀನು ಕೊಡುವುದಾಗಿ ಹೇಳಿದ್ದಾನೆ. ಅದರಂತೆ ರಿಯಲ್ ಎಸ್ಟೇಟ್ ಏಜೆಂಟ್ಗಳು ಕೆಲವರೊಂದಿಗೆ ಜಮೀನು ನೋಡಲು ಬಂದು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿಜವಾದ ಭೂ ಮಾಲೀಕ ನಾಗಪ್ಪ ಏಜೆಂಟ್ಗಳನ್ನು ವಿಚಾರಿಸಿದಾಗ ಜಮೀನು ಮಾರಾಟಕ್ಕಿಟ್ಟಿರುವ ವಿಷಯ ತಿಳಿದು ಬಂದಿದೆ. ತಕ್ಷಣವೇ ತಾಲೂಕು ಕಚೇರಿಗೆ ದೌಡಾಯಿಸಿದ ನಾಗಪ್ಪ, ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ.
ಗೂಳೂರು ಕಂದಾಯ ವೃತ್ತದ ಜಿಲಾಜಿರ್ಲ ಗ್ರಾಮದ ಸರ್ವೇ ನಂ.10/ಪಿ25 ರಲ್ಲಿ ಯಗವಬಂಡ್ಲಕೆರೆ ಗ್ರಾಮದ ನಾಗಪ್ಪ ಬಿನ್ ಪೆದ್ದನ್ನ ಹೆಸರಿನಲ್ಲಿ ಮೂರು ಎಕರೆ ಜಮೀನು ಇದೆ. ಆದರೆ, ರೈತ ನಾಗಪ್ಪ ಜೀವಂತವಾಗಿದ್ದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿದ್ದಾರೆ. ಇದು ಕಂದಾಯ ಇಲಾಖೆ ಅಧಿಕಾರಿಗಳ ಖತರ್ನಾಕ್ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಡಿ.ಎ. ದಿವಾಕರ್ ಅವರನ್ನು ನಾಗಪ್ಪ ವಿಚಾರಿಸಿದಾಗ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ. ಆದರೆ, ಖಾತೆ ರದ್ದು ಮಾಡುವ ಅಧಿಕಾರ ನನಗಿಲ್ಲ, ಉಪ ವಿಭಾಗಾಧಿಕಾರಿ ಕಚೇರಿಗೆ ದಾಖಲೆ ಸಮೇತ ದೂರು ಸಲ್ಲಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.