ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ ಸೇರಿದಂತೆ ಜಿಲ್ಲೆಯ ಹಲವು ಕಡೆ ಭಾರಿ ಮಳೆಯಾಗಿದೆ. ಪರಿಣಾಮ ಗುಡಿಬಂಡೆಯ ಭೈರಸಾಗರ, ಅಮಾನಿಕೆರೆ, ಗೌರಿಬಿದನೂರಿನ ಮೇಳ್ಯ ಕೆರೆ ಕೊಡಿ ಒಡೆದು ಒಂದು ಟ್ರ್ಯಾಕ್ಟರ್ ಸೇರಿದಂತೆ 2 ಬೈಕ್ಗಳು ಕೊಚ್ಚಿ ಹೋಗಿದ್ದರೆ, ಹಲವು ಮನೆಗಳು ಕುಸಿದಿವೆ.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ನಡುವೆ ಮಾರ್ಗ ಕಲ್ಪಿಸುವ ಜಕ್ಕಲಮಡುಗು ಗ್ರಾಮದ ಕೆರೆ ತುಂಬಿ ಸೇತುವೆ ಜಲಾವೃತವಾಗಿದೆ. ಇದರಿಂದ ಗುಂಗೀರನಹಳ್ಳಿಯಿಂದ ಜಕ್ಕಲಮುಡುವಿಗೆ ಹೋಗಲು ಅಸಾಧ್ಯವೆನ್ನುವಂತೆ ರಸ್ತೆ ನೀರಿನಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಶಾಲಾ ಕಾಲೇಜಿಗೆ ಹೋಗುವ ಹಾಗು ಕೆಲಸಕ್ಕೆ ಹೋಗುವವರು ಮತ್ತು ಗ್ರಾಮಸ್ಥರು ಸಾಕಷ್ಟು ಪರದಾಟ ನಡೆಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ 3 ರಿಂದ 4 ಅಡಿ ಎತ್ತರ ಕೆರೆ ನೀರು ಹರಿಯುತ್ತಿದ್ದು, ಸಾಕಷ್ಟು ವಾಹನಗಳು ರಸ್ತೆಯಲ್ಲಿಯೇ ನಿಂತು ತಳ್ಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ನಗರಕ್ಕೆ ಹಾಗೂ ಮತ್ತೊಂದು ಗ್ರಾಮಕ್ಕೆ ಹೋಗಬೇಕಾದ್ರೆ ಬೈಕ್ಗಳನ್ನು ತಳ್ಳಿಕೊಂಡು ಹೋಗಬೇಕಾಗಿದೆ.
ಕಳೆದ ವರ್ಷವಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಗುಂಗಿರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆಬಾಗಿಲಿಗೆ ಕಂದಾಯ ಸೇವೆ ಯೋಜನೆಗೆ ಇದೇ ಗ್ರಾಮದಲ್ಲಿ ಚಾಲನೆ ನೀಡಿದ್ದರು. ಸದ್ಯ ಗ್ರಾಮಕ್ಕೆ ಸೇತುವೆ ಕಟ್ಟಿಕೊಡಲು ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಇದುವರೆಗೂ ಸೂಕ್ತ ಕ್ರಮಕೈಗೊಳ್ಳದೇ ಇರುವುದು ಗ್ರಾಮಸ್ಥರಿಗೆ ಸಾಕಷ್ಟು ಬೇಸರ ಮೂಡಿಸಿದೆ.
ಸೂಕ್ತ ಕ್ರಮಕ್ಕೆ ಸ್ಥಳೀಯರಿಂದ ಮನವಿ: ಇನ್ನು, ಗುಂಗುರ್ಲಹಳ್ಳಿ ಬಳಿ ಕಾಲುವೆ ಉಕ್ಕಿ ಹರಿಯುತ್ತಿದ್ದು, ಹಬ್ಬದ ಸಡಗರದಲ್ಲಿ ಗ್ರಾಮಸ್ಥರಿಗೆ ನಿದ್ದೆ ಇಲ್ಲದಂತಾಗಿದೆ. ಯಾವುದೇ ಅಪಾಯವಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಓದಿ: ಜಡಿಮಳೆಗೆ ನಲುಗಿದ ಬೆಂಗಳೂರಿನ ಬಡಾವಣೆಗಳು: ಎಲ್ಲೆಲ್ಲೂ ನೀರು, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್