ಚಿಕ್ಕಬಳ್ಳಾಪುರ: ಸುಧಾಕರ್ ಹಣದಿಂದ ಏನು ಬೇಕಾದ್ರೂ ಸಾಧಿಸಬಹುದು ಅಂತ ಅಂದುಕೊಂಡಿದ್ದಾರೆ. ಪ್ರತಿ ಸಾರಿ ಜನರನ್ನು ಹಣದಿಂದ ಕೊಂಡುಕೊಳ್ಳಬಹುದು ಅಂತ ತಿಳಿದಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಬಿಜೆಪಿ ಬರೀ ಘೋಷಣೆಗೆ ಸೀಮಿತ:
ನೆರೆ ವೀಕ್ಷಣೆಗೆ ಸರ್ಕಾರದ ಮಂತ್ರಿಗಳು ಬಂದ ಪುಟ್ಟ ಹೋದ ಪುಟ್ಟ ಎಂಬುದಕ್ಕೆ ಸೀಮಿತವಾಗಿದೆ. ಕಳೆದ ಮೂರು ವರ್ಷಗಳಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಹಿಂದೆ ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಬರೇ ಘೋಷಣೆಗಳಿಗೆ ಸೀಮಿತವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಂದ್ರೆ ಕೈ ನಾಯಕರಿಗೆ ಜ್ವರ ಬರುತ್ತೆ:
ಚುನಾವಣೆ ಬಂದ್ರೆ ಕಾಂಗ್ರೆಸ್ ನಾಯಕರಿಗೆ ಜ್ವರ ಶುರುವಾಗುತ್ತೆ. ಚುನಾವಣೆ ಹತ್ತಿರ ಬಂದಂತೆ ಜೆಡಿಎಸ್ ಬಿಜೆಪಿ ಒಪ್ಪಂದ ಮುಗಿದಮೇಲೆ ಮರೆತು ಹೋಗುತ್ತಾರೆ. ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿದ್ದೇನೆ. ಬಿಜೆಪಿಯವರೂ ಹಾಕಿದ್ದಾರೆ. ನಮ್ಮನ್ನು ಸೋಲಿಸೋದಕ್ಕೆ ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಕಳುಹಿಸಿ ಅಭ್ಯರ್ಥಿ ಮಾಡಿದರು. ಮಂಡ್ಯದಲ್ಲಿ ಮಂತ್ರಿಯ ಪಿಎ ಕರೆತಂದು ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಮಾಡಿದ್ದಾರೆ. ಅಪ್ಪ ಕಾಂಗ್ರೆಸ್ನಲ್ಲಿ ಅಭ್ಯರ್ಥಿಯಾದರೆ ಮಗ ಬಿಜೆಪಿಯಲ್ಲಿ ಅಭ್ಯರ್ಥಿ ಆಗ್ತಾರೆ. ನನ್ನ ಭಾಗದ ಆರು ಕ್ಷೇತ್ರದ ಮತದಾರಾರು ಕಾಂಗ್ರೆಸ್ಗೆ ಉತ್ತರ ಕೊಡ್ತಾರೆ ಎಂದು ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ಜೆಡಿಎಸ್ ಮುಖಂಡ ರವಿಕುಮಾರ್ ಜೆಡಿಎಸ್ ಪಕ್ಷ ತೊರೆಯುವ ಸೂಚನೆ ಕೇಳಿಬರುತ್ತಿತ್ತು. ಇದರಿಂದ ವಿಧಾನಪರಿಷತ್ ಚುನಾವಣೆಗೆ ಡ್ಯಾಮೇಜ್ ಆಗುವುದನ್ನು ತಪ್ಪಿಸಲು, ರವಿಕುಮಾರ್ ಮನವೊಲಿಸಲು ಇಂದು ಕುಮಾರಸ್ವಾಮಿ ನಗರಕ್ಕೆ ಆಗಮಿಸಿದರು.