ಚಿಕ್ಕಬಳ್ಳಾಪುರ: ಮನುಷ್ಯನಿಗೆ ಎಚ್ಚರಿಕೆ ನೀಡಲು ಭೂ ಕಂಪನ ಹಾಗೂ ಪ್ರವಾಹಗಳು ಸಂಭವಿಸುತ್ತದೆ. ಅವುಗಳನ್ನು ಅರಿತಾದರೂ ಪರಿಸರವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಗುಡಿಬಂಡೆ ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಹೇಳಿದರು.
ಭೂಮಿಯ ಮೇಲಿನ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿ ಮೇಲೆ ಅವಲಂಬಿತವಾಗಿದೆ. ಭೂಮಿ ಮೇಲಿರುವ ಪ್ರತಿಯೊಂದು ಜೀವ ಸಂಕುಲವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮನುಕುಲದ ರಕ್ಷಣೆ ಸಾಧ್ಯ. ಅರಣ್ಯ ನಾಶದಿಂದಾಗಿ ಜೀವಸಂಕುಲವೇ ಮುಂದಿನ ದಿನಗಳಲ್ಲಿ ನಾಶವಾಗುವ ಸಾಧ್ಯತೆ ಕಂಡುಬರುತ್ತಿದೆ. ಆದರೆ, ಅದೆಲ್ಲವನ್ನೂ ತಿಳಿದ ಮನುಷ್ಯ, ಪರಿಸರ ಸಂರಕ್ಷಣೆ ಮಾಡದೇ ಅದನ್ನು ನಾಶ ಮಾಡುವ ಕಾಯಕದಲ್ಲಿ ತೊಡಗಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಈಗಾಗಲೇ ಕೊಡಗು, ಮಡಿಕೇರಿ, ಉತ್ತರ ಕರ್ನಾಟಕ, ತಮಿಳುನಾಡು, ಕೇರಳ ಅನೇಕ ಪ್ರದೇಶಗಳಲ್ಲಿ ಪರಿಸರದ ನಾಶದಿಂದಾಗಿ ಪ್ರವಾಹಗಳು ಬಂದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುವುದರ ಜೊತೆಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಊಟ ವಸತಿ ಇಲ್ಲದೇ ಪರದಾಡುವಂತಾಗಿದೆ ಎಂದರು.