ಬಾಗೇಪಲ್ಲಿ : ತಾಲೂಕಿನ ಮಿಟ್ಟೇಮರಿ ಹೋಬಳಿಯ ಗೊಲ್ಲಪಲ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ರೈತನೋರ್ವ ಬೆಳೆದಿದ್ದ ಸುಮಾರು 25 ಲಕ್ಷ ರೂ. ಮೌಲ್ಯದ ದ್ರಾಕ್ಷಿ ಬೆಳೆ ನೆಲಕಚ್ಚಿದೆ.
ವೆಂಕಟರೆಡ್ಡಿ ತನ್ನ ಎರಡೂವರೆ ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದ. ಇನ್ನೇನು ಒಂದೂವರೆ ತಿಂಗಳೊಳಗೆ ಕಟಾವು ಮಾಡಬೇಕಿತ್ತು. ಆದರೆ, ಮೊನ್ನೆ ಸುರಿದ ಅಕಾಲಿಕ ಮಳೆಗೆ ದ್ರಾಕ್ಷಿ ಗೊಂಚಲುಗಳು ನೆಲಕಚ್ಚಿವೆ.
ಈ ಕುರಿತು ರೈತ ವೆಂಕಟರೆಡ್ಡಿ ಪ್ರತಿಕ್ರಿಯಿಸಿ, ಕಳೆದ ಎರಡು ವರ್ಷದ ಹಿಂದೆ ನೋಟು ಅಮಾನ್ಯೀಕರಣದಿಂದ ಬೆಳೆ ಮಾರಾಟ ಮಾಡಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ಮಾರುಕಟ್ಟೆ ಇರದೇ ಬೆಳೆದ ದ್ರಾಕ್ಷಿಯನ್ನು ಉಚಿತವಾಗಿ ಹಂಚಿದ್ದೇನೆ. ಇದೀಗ ಮಳೆಗೆ ದ್ರಾಕ್ಷಿ ಗೊಂಚಲುಗಳು ನೆಲದ ಪಾಲಾಗಿವೆ.
ಪ್ರಾಕೃತಿಕ ತೊಂದರೆಗಳಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದೇವೆ. ಸರ್ಕಾರ ಕೂಡಲೇ ಬೆಳೆ ನಷ್ಟ ಪರಿಹಾರ ಕಲ್ಪಿಸಬೇಕು. ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.