ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಶಾಂತಿ ಕದಡಿದರೆ ಸರ್ಕಾರ ಸಹಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರವಾಸ ಕೈಗೊಂಡ ವೈದ್ಯಕೀಯ ಶಿಕ್ಷಣ ಸಚಿವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದರು. ತಾಲೂಕಿನ 186 ಜನರಿಗೆ ಹಕ್ಕುಪತ್ರ ವಿತರಣೆ, ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಂತರ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ಉತ್ತರಿಸಿದ್ದಾರೆ.
ಬೆಂಗಳೂರಲ್ಲಿ ನಡೆದ ಘಟನೆ ಗಮನಿಸಿದರೆ ವ್ಯವಸ್ಥಿತ ಪಿತೂರಿ ಅನಿಸ್ತಿದೆ. ಇದು ದುರದೃಷ್ಟ ಘಟನೆಯಾಗಿದ್ದು, ಹಿಂಸೆಯಿಂದ ಏನೂ ಸಾಧಿಸಲು ಸಾಧ್ಯ ಇಲ್ಲ. ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆಯ ನಂತರ ಕಠಿಣ ಶಿಕ್ಷೆ ಆಗಬೇಕು ಎಂದರು.
ಇಂತಹ ದುರ್ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ನಾನು ನೋಡಿಲ್ಲ. ಇಂತಹ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಕಾಶ್ಮೀರದಲ್ಲಿ ನೋಡಿದ್ದೆ. ಬೆಂಗಳೂರಲ್ಲಿ ಶಾಂತಿ ಕದಡಿದರೆ ಸರ್ಕಾರ ಸಹಿಸಲ್ಲ ಎಂದು ಹೇಳಿದರು.
ಶವದ ಮೇಲೆ ರಾಜಕಾರಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ಕಾಂಗ್ರೆಸ್ಗೆ ಕರಗತ ಆಗಿದೆ. ಆ ರೀತಿ ರಾಜಕಾರಣ ನಮಗೆ ಅವಶ್ಯಕತೆ ಇಲ್ಲ. ಕೊರೊನಾ, ನೆರೆ ಸಂದರ್ಭದಲ್ಲಿ ನಮಗೆ ಕೆಲಸ ಜಾಸ್ತಿ ಇದೆ ಎಂದು ದಿನೇಶ್ ಗುಂಡೂರಾವ್ಗೆ ತಿರುಗೇಟು ನೀಡಿದರು.