ಗುಡಿಬಂಡೆ: ಸರ್ಕಾರಿ ವಾಹನಗಳಿರುವುದು ಸಾರ್ವಜನಿಕರ ಕೆಲಸಕ್ಕಾಗಿ. ಆದರೆ ಗುಡಿಬಂಡೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯ ಸರ್ಕಾರಿ ವಾಹನವನ್ನು ಸಿಬ್ಬಂದಿ ದುರ್ಬಳಕೆ ಮಾಡಿಕೊಂಡು ಹತ್ತಿರದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಟ್ಟಣದ ಸಮೀಪದ ಚೋಳಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಅರಣ್ಯಕ್ಕೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯ ಸರ್ಕಾರಿ ವಾಹನದಲ್ಲಿ ಸುಮಾರು 4 ಜನ ಹಾಗೂ ದ್ವಿಚಕ್ರ ವಾಹನಗಳಲ್ಲಿ ನಾಲ್ವರು ಬಂದಿದ್ದಾರೆ. ಅಲ್ಲಿದ್ದ ಕೆಲವರು ಅವರನ್ನು ಕಂಡು ಅರಣ್ಯದಲ್ಲಿರುವ ಯಾರಿಗಾದರೂ ಕೊರೊನಾ ಸೋಂಕು ಬಂದಿರಬಹುದೆಂದು ಕುತೂಹಲದಿಂದ ನೋಡಿದ್ದಾರೆ. ಆದರೆ ಅಲ್ಲಿ ಗಾಡಿಯಿಂದ ಇಳಿದವರು ಸ್ವಲ್ಪ ಸಮಯ ಯಾರಿಗೂ ಕಾಣಸಿಗಲಿಲ್ಲ. ನಂತರ ಜೀಪ್ ಹತ್ತಿ ವಾಪಸಾಗಿದ್ದಾರೆ.
ಆರೋಗ್ಯ ಸಮಸ್ಯೆಗಳ ಕುರಿತಂತೆ ಅನೇಕರು ಹಲವು ಬಾರಿ ಅಧಿಕಾರಿಗಳಿಗೆ ಕರೆ ಮಾಡಿದರೂ ಬಾರದ ವಾಹನಗಳು ಈಗ ಅರಣ್ಯಕ್ಕೆ ಭೇಟಿ ನೀಡಿರುವುದಾದರೂ ಏಕೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಕುರಿತು ಸರ್ಕಾರಿ ವಾಹನ ನಿಮ್ಮ ಅನುಮತಿಯಿಂದ ಅರಣ್ಯ ಪ್ರದೇಶಕ್ಕೆ ತಲುಪಿದೆಯೇ ಎಂದು ತಾಲೂಕು ಆರೋಗ್ಯಾಧಿಕಾರಿ ನರಸಿಂಹಮೂರ್ತಿ ಅವರಲ್ಲಿ ಪ್ರಶ್ನಿಸಿದರೆ, ನನ್ನ ಅನುಮತಿಯಲ್ಲದೆ ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.