ಚಿಕ್ಕಬಳ್ಳಾಪುರ: ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂತತಿ, ಸಂರಕ್ಷಣೆ ಹಾಗೂ ಅಧ್ಯಯನದ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಹೊರವಲಯದ ಡಿಸ್ಕವರಿ ವಿಲೇಜ್‌ನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ 'ಕರ್ನಾಟಕ ಹಕ್ಕಿ ಹಬ್ಬ' ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಸಿಸಿ ಪಾಟೀಲ್ ಚಾಲನೆ ನೀಡಿದರು.
ಶುಕ್ರವಾರದಿಂದ 3 ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಹಕ್ಕಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂವಾದ, ಉಪನ್ಯಾಸಗಳು ನಡೆಯಲಿವೆ. ರಾಜ್ಯದ ಹಲವೆಡೆಯಿಂದ ಪಕ್ಷಿ ಪ್ರೇಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಹಕ್ಕಿಗಳ ಸಂರಕ್ಷಣೆಗೆ ಅಧಿಕಾರಗಳು ಶ್ರಮ ವಹಿಸುತ್ತಿರುವುದು ಶ್ಲಾಘನೀಯ. ಈಗ ಪಕ್ಷಿಗಳ ಸಂತತಿ ಅಳಿವಿನ ಅಂಚಿನಲ್ಲಿದೆ. ಅವುಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಹಕ್ಕಿಗಳ ಹಬ್ಬದ ಮುಖಾಂತರ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗಲಿ. ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸಬೇಕು. ಪಕ್ಷಿಗಳ ಸಂತತಿ ಹೆಚ್ಚಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಹಕ್ಕಿ ಹಬ್ಬ ಕಾರ್ಯಾಗಾರದ ಕುರಿತು ಹರ್ಷ ವ್ಯಕ್ತಪಡಿಸಿದರು.