ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ ರಾಷ್ಟೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಚಿತ್ರಾವತಿ ಜಲಾಶಯದ ಎಡ ಭಾಗದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ವಸತಿ ಗೃಹದಲ್ಲಿ ಅಧಿಕಾರಿಗಳು ವಾಸವಿಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರ ಕುರಿ ಸಾಕಾಣಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.
ಸುಮಾರು 10 ವರ್ಷಗಳ ಹಿಂದೆಯೇ ಈ ವಸತಿಗೃಹ ನಿರ್ಮಾಣಗೊಂಡಿದೆ. ಆದ್ರೆ ಯಾವುದೇ ಸರ್ಕಾರಿ ಅಧಿಕಾರಿಗಳು ಇಲ್ಲಿ ವಾಸವಿಲ್ಲ. ಈ ಕಟ್ಟಡದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕುರಿಗಳ ಸಾಕಾಣಿಕೆ ನಡೆದರೆ, ರಾತ್ರಿ ಸಮಯದಲ್ಲಿ ಕುಡುಕರ ಪಾಲಿನ ತಣ್ಣನೆಯ ತಾಣವಾಗಿದೆ.
ಮಂತ್ರಿಗಳು ಚಿತ್ರಾವತಿ ಜಲಾಶಯ ವೀಕ್ಷಣೆ ಮಾಡಲು ಬಂದಾಗ ಮಾತ್ರ ಸ್ಥಳೀಯ ಅಧಿಕಾರಿಗಳು ವಸತಿ ಗೃಹಗಳಿಗೆ ಸುಣ್ಣ ಬಣ್ಣ ಬಳಿದು ಕಿಟಕಿ ಬಾಗಿಲಗಳನ್ನು ಸಿದ್ಧಪಡಿಸುತ್ತಾರೆ. ನಂತರ ಮತ್ತೆ ಯಾಥಾ ಸ್ಥಿತಿಯಂತೆ ಹಾಳು ಕೊಂಪೆಯಾಗುತ್ತೆ ಈ ವಸತಿ ಗೃಹ.
ಕಳೆದ ಹಲವಾರು ವರ್ಷಗಳಿಂದ ವಸತಿ ಗೃಹ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಹಾಳಾದ ವಸತಿ ಗೃಹಗಳ ಸುತ್ತ ದಟ್ಟವಾಗಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಹತ್ತಾರು ಲಕ್ಷ ರೂ ಖರ್ಚು ಮಾಡಿ ಇಂಥ ಕಟ್ಟಡಗಳ ನಿರ್ಮಾಣ ಮಾಡಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.