ಚಿಕ್ಕಬಳ್ಳಾಪುರ : ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಇಂದು ಸಹ ವರುಣ ತನ್ನ ಆರ್ಭಟವನ್ನು ಮುಂದುವರೆಸಿದ್ದಾನೆ. ಉತ್ತಮ ಮಳೆಯಾಗ್ತಿರುವುದಿಂದ ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಬರದ ನಾಡಲ್ಲಿ ಮಳೆಯಿಲ್ಲದೆ ಜನ ಬೇಸತ್ತಿದ್ದರು. ಆದರೆ, ಕಳೆದ ನಾಲ್ಕು ದಿನಗಳಿಂದ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ಜನತೆಗೆ ಸಂತಸ ತಂದಿದೆ. ಇನ್ನು, ಮಳೆಯ ಆರ್ಭಟದಿಂದ ಹಲವೆಡೆ ಮನೆಯ ಒಳಗೆ ನೀರು ಸೇರಿಕೊಳ್ಳುತ್ತಿದ್ದು, ಕೆಲವು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಜೊತೆಗೆ ಚರಂಡಿಗಳ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಧಿಕಾರಿಗಳು, ಜನ ನಾಯಕರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಚಿಂತಾಮಣಿ ತಾಲೂಕಿನ ರಾಯಪಲ್ಲಿ ಗ್ರಾಮದಲ್ಲಿ 120ಕ್ಕೂ ಹೆಚ್ಚು ಮನೆಗಳಿದ್ದು, ಸೂಕ್ತ ವಾದ ಚರಂಡಿ ವ್ಯವಸ್ಥೆ ಇಲ್ಲ. ಪರಿಣಾಮ ಗ್ರಾಮದ ರತ್ನಮ್ಮ ಎಂಬುವರ ಮನೆಗೆ ಚರಂಡಿ ನೀರು ನುಗ್ಗಿದೆ. ಈ ಕುರಿತಂತೆ ತಹಶೀಲ್ದಾರ್ ವಿಶ್ವನಾಥ್, ಸಿಇಒ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಂತಾಮಣಿ ನಗರದಲ್ಲಿ 2ಗಂಟೆಗೂ ಅಧಿಕ ಸಮಯ ಮಳೆ ಸುರಿದ ಹಿನ್ನೆಲೆ ರಸ್ತೆಗಳಲ್ಲಿ ನೀರು ನಿಂತು ಸವಾರರು ಸ್ವಲ್ಪ ಪರದಾಡುವಂತಾಯಿತು. ಜಿಲ್ಲೆಯ ಬಹುತೇಕ ರೈಲ್ವೆ ಅಂಡರ್ ಪಾಸ್ಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆಯಿಂದಾಗಿ ರೈಲ್ವೆ ಅಂಡರ್ ಪಾಸ್ಗಳಲ್ಲಿ ನೀರು ತುಂಬಿ ಸರ್ವಾಜನಿಕರು, ಸವಾರರು ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಾಕಷ್ಟು ಬಾರಿ ಅಧಿಕಾರಿಗಳು, ಜನ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ನೀರಿಲ್ಲದೆ ಕೆರೆಗಳೆಲ್ಲ ಸಂಪೂರ್ಣ ಭತ್ತಿ ಹೋಗಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.