ಚಿಕ್ಕಬಳ್ಳಾಪುರ: ಒಂದು ಕಡೆ ಕೊರೊನಾ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಕಂಗಾಲಾಗಿದ್ದಾರೆ.
ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಬೆಳೆಗಾರರಿಗೆ ಮಾವಿನ ಹಣ್ಣಿಗೆ ಸೂಕ್ತ ಬೆಲೆಯಿಲ್ಲದೆ ಕಾರಣ ರೈತರಿಗೆ ದಿಕ್ಕು ತೋಚದಂತಾಗಿದೆ. ನಗರದ ಬಿ ಬಿ ರಸ್ತೆಯಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್ ನಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಈ ಮಾರುಕಟ್ಟಗೆ ಮಾವಿನ ಬೆಳೆ ಬರುತ್ತದೆ. ಆದರೆ ಕೋವಿಡ್ ನಿಯಮಾನುಸಾರವಾಗಿ ಬೆಳಗ್ಗೆ 6ರಿಂದ10ರ ವರಗೆ ಮಾತ್ರ ಮಾರುಕಟ್ಟೆ ತೆರೆಯಲು ಅವಕಾಶವಿದ್ದು, ಇದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಬೆ. 10 ಗಂಟೆ ಮುಗಿದ ನಂತರ ಮಾವಿನಕಾಯಿಯನ್ನು ಕೇಳುವವರಿಲ್ಲದೇ ರಾಶಿ ರಾಶಿ ಮಾವಿನ ಹಣ್ಣನ್ನು ರೈತರು ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿದ್ದಾರೆ. ರೈತರು ತಾವು ತಂದ ಮಾವಿನ ಬೆಳೆಯನ್ನು ಸರಿಯಾಗಿ ಮಾರಾಟ ಮಾಡಲು ಸಮಯ ಸಾಲುತ್ತಿಲ್ಲ. ಹಾಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಹೆಚ್ಚಿನ ಸಮಯ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಮಾವಿನಕಾಯಿ ಮಾರುಕಟ್ಟೆಯ ವ್ಯಾಪಾರಸ್ಥರಾದ ಸೈಯದ್ ಇಸೂಪ್ ಮಾತನಾಡಿ, ಮಾವಿನ ಬೆಳೆಯು ವರ್ಷಕ್ಕೆ ಒಂದೇ ಬಾರಿ ಬರುತ್ತದೆ. ಈ ಕೊರೊನಾ ಸಮಯದಲ್ಲಿ ರೈತರು ತಾವು ತಂದ ಬೆಳೆಯನ್ನು ಮಾರಾಟ ಮಾಡಲು ಸಮಯ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಬೆಳೆ ಮಾರಾಟವಾಗಿಲ್ಲ ಎಂದು ರೈತರು ವಿಧಿ ಇಲ್ಲದೆ ಇಲ್ಲಿಗೆ ಬಂದು ಹಾಕುತ್ತಿದ್ದಾರೆ, ಆದರೆ ಬೆಲೆ ಇಲ್ಲದೆ ಕಾರಣ ಅರ್ಧ ಭಾಗದಷ್ಟು ಹಣ್ಣು ಕೊಳೆತು ಹೋಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.