ಗುಡಿಬಂಡೆ(ಚಿಕ್ಕಬಳ್ಳಾಪುರ): ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಗುಡಿಬಂಡೆಯಲ್ಲಿನ ಕೆಲ ಇಲಾಖೆಗಳನ್ನು ಬಿಟ್ಟರೆ ಉಳಿದೆಲ್ಲಾ ಇಲಾಖೆಗಳಲ್ಲಿ ಪ್ರಭಾರ ಅಧಿಕಾರಿಗಳೇ ಇದ್ದಾರೆ. ಇದರಿಂದ ಕಚೇರಿಗಳಲ್ಲಿ ರೈತರು ಹಾಗೂ ಜನಸಾಮಾನ್ಯರ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಗುಡಿಬಂಡೆ, ತಾಲೂಕಿನ ದಂಡಾಧಿಕಾರಿಗಳು, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಭಾರಿಗಳಾಗಿದ್ದಾರೆ. ಇವರು ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾಗದೆ ದೈನಂದಿನ ಸಾರ್ವಜನಿಕರ ಕೆಲಸಕ್ಕೆ ತೊಂದರೆಯುಂಟಾಗಿದೆ. ತಾಲೂಕಿನ ದಂಡಾಧಿಕಾರಿಗಳು ಚಿಂತಾಮಣಿಗೆ ವರ್ಗಾವಣೆಗೊಂಡು ಒಂದೂವರೆ ತಿಂಗಳು ಕಳೆಯುತ್ತಿದೆ. ಆದರೂ ಇಲ್ಲಿಗೆ ನೂತನ ತಹಶೀಲ್ದಾರ್ ನೇಮಕವಾಗಿಲ್ಲ. ಇನ್ನೊಂದೆಡೆ ತಾಲೂಕಿನ ಸುತ್ತಮುತ್ತಲಿನ ತಾಲೂಕುಗಳಾದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಗಡಿ ಪ್ರದೇಶವಾದ ಆಂಧ್ರ ಪ್ರದೇಶದ ಹಿಂದೂಪುರದಲ್ಲೂ ಕೊರೊನಾ ಸೊಂಕಿತರಿದ್ದು, ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಪೊಲೀಸರ ಕಣ್ಗಾವಲಿನಿಂದಾಗಿ ಯಾವುದೇ ಕೇಸ್ ಇಲ್ಲಿ ಪತ್ತೆಯಾಗಿಲ್ಲ ಎಂದು ಹೇಳಿದರು.
ಮುಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ರೈತರಿಗೆ ಅವಶ್ಯಕವಾಗಿ ಬೇಕಿರುವ ಕೃಷಿ ಇಲಾಖೆಯಲ್ಲಿ ಸುಮಾರು ತಿಂಗಳುಗಳಿಂದ ಕಾಯಂ ಸಹಾಯಕ ಕೃಷಿ ನಿರ್ದೇಶಕರು ಪ್ರಭಾರ ಹುದ್ದೆಯಲ್ಲಿದ್ದಾರೆ. ಇದರ ಜೊತೆಗೆ ಅಲ್ಲಿದ್ದ ಇತರೆ ಅಧಿಕಾರಿಗಳನ್ನು ಕೂಡ ಬೇರೆ ತಾಲೂಕಿಗಳಿಗೆ ವರ್ಗಾಯಿಸಿದ್ದಾರೆ. ಇದರಿಂದಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದ ತಾಲೂಕು ಪಂಚಾಯತ್ ಮುಖ್ಯಸ್ಥರಾದ ಕಾರ್ಯನಿರ್ವಹಣಾಧಿಕಾರಿಗಳು ಸಹ ಪ್ರಭಾರಿಯಾಗಿದ್ದಾರೆ. ಅವರು ಗೌರಿಬಿದನೂರಿನಲ್ಲಿ ಕಾಯಂ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವುದರಿಂದ ಗುಡಿಬಂಡೆಗೆ ವಾರಕ್ಕೊಮ್ಮೆ ಬರುತ್ತಾರೆ. ಈ ರೀತಿಯಾದರೆ ರೈತರು ಹಾಗೂ ಕೂಲಿಕಾರರ ಕೆಲಸಗಳನ್ನು ಮಾಡಿಕೊಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.