ಬಾಗೇಪಲ್ಲಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಇಂದು ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ಹಸಿರು ಸೇನೆ ರಾಜ್ಯ ಸಂಚಾಲಕ ಎಸ್.ಲಕ್ಷ್ಮಣ ರೆಡ್ಡಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಾಗೇಪಲ್ಲಿ ತಾಲ್ಲೂಕು ಘಟಕ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
'ಕೃಷಿ ಭೂಮಿ ನಮ್ಮದು ಮಾರಾಟಕ್ಕಿಲ್ಲ, ಪ್ರಾಣ ಕೊಟ್ಟೇವು ಕೃಷಿ ಭೂಮಿ ಕೊಡೆವು, ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ' ಎಂಬ ಘೋಷಣೆಗಳನ್ನು ಮೊಳಗಿಸಿದರು.
ಆಗಸ್ಟ್ 8 ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದ ದಿನ. ಈ ದಿನದಂದೇ ಕಾರ್ಪೊರೇಟ್ ಕಂಪನಿಗಳು ಕೃಷಿ ಬಿಟ್ಟು ತೊಲಗಲಿ ಎಂಬ ಚಳವಳಿ ಆರಂಭಿಸಲಾಗಿದೆ ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಲಕ್ಷ್ಮಣ ರೆಡ್ಡಿ ಹೇಳಿದರು.
ರಾಜ್ಯ ಸರ್ಕಾರವು ಜನವಿರೋಧಿ ಶಾಸನಗಳನ್ನು ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತರುತ್ತಿದೆ. ಶಾಸನ ಸಭೆ ನಡೆಸದೇ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಿದೆ. ಇದು ಪಾಳೇಗಾರಿಕೆಯ ಸರ್ಕಾರ ಎಂದು ರಾಜ್ಯ ಹಸಿರು ಸೇನೆ ರಾಜ್ಯ ಮಹಿಳಾ ಸಂಚಾಲಕಿ ಸಿ.ಉಮಾ ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರವು ಭೂಗಳ್ಳರು, ಕಾರ್ಪೋರೇಟ್ ಕಂಪನಿಗಳು ಹಾಗೂ ಗೃಹನಿರ್ಮಾಣ ಸಹಕಾರ ಸಂಘಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕಿಡಿಕಾರಿದರು.