ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ದಸರ ಸಂಭ್ರಮ ಜೋರಾಗಿದೆ. ನವರಾತ್ರಿ ಸಮಯದಲ್ಲಿ ಗೊಂಬೆಗಳಿಗೆ ಪೂಜಿಸುವುದು ಸಂಪ್ರದಾಯ. ಇದರ ಸಲುವಾಗಿಯೇ ಹಲವೆಡೆ ಮನೆಯಲ್ಲಿ ಗೊಂಬೆಗಳನ್ನು ಇಟ್ಟು ವಿಶೇಷವಾಗಿ ಹಬ್ಬ ಆಚರಿಸುತ್ತಾರೆ. ವಿವಿಧ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಾರೆ.
ಶಿಡ್ಲಘಟ್ಟದ ಸಾವಿತ್ರಿ ಹಾಗೂ ಪ್ರಕಾಶ್ ಬಾಬು ಎಂಬ ದಂಪತಿ 30 ವರ್ಷಗಳಿಂದ ಗೊಂಬೆಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನವರಾತ್ರಿ ಸಮಯದಲ್ಲಿ ಭಿನ್ನವಾಗಿ ಕಾಣುವಂತೆ ಜೋಪಾನವಾಗಿ ಗೊಂಬೆಗಳನ್ನು ಜೋಡಿಸಿ ನಿತ್ಯ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ.
ಮೈಸೂರು ಮಹಾರಾಜರು ಸೇರಿದಂತೆ ತಾಯಿ ಚಾಮುಂಡೇಶ್ವರಿ, ಶಿವಪಾರ್ವತಿ, ರಾಮಾಯಣ, ಮಹಾಭಾರತದಲ್ಲಿ ಬರುವ ಪಾತ್ರಧಾರಿಗಳ ಗೊಂಬೆಗಳು, ಲಕ್ಷ್ಮಿ, ಸರಸ್ವತಿ ಹಾಗೂ ರೈತರ ಗೊಂಬೆಗಳನ್ನು ಇಡುತ್ತಾರೆ. ಮನೆಯನ್ನು ಸಂಪೂರ್ಣವಾಗಿ ಸಿಂಗರಿಸಲಾಗುತ್ತದೆ. ಬೊಂಬೆಗಳು ಮನೆಗೂ ಮನಸ್ಸಿಗೂ ಮುದ ನೀಡುವುದಲ್ಲದೆ, ದಸರಾ ಹಬ್ಬದ ಸಂಭ್ರಮಕ್ಕೂ ತಮ್ಮ ಕಾಣಿಕೆ ನೀಡುತ್ತವೆ.