ಬಾಗೇಪಲ್ಲಿ: ತಾಲೂಕಿನ ಕಸಬಾ ಹೋಬಳಿಯ ಪೊತೇಪಲ್ಲಿ ಗ್ರಾಮ ಪುರಸಭೆಯಿಂದ 5 ಕಿ.ಮೀ. ದೂರದಲ್ಲಿದ್ದು, ಸುಮಾರು 500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಯಾವುದೇ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಗ್ರಾಮಕ್ಕೆ ಕುಡಿಯುವ ನೀರಿಗಾಗಿ 2 ಬೋರ್ವೆಲ್ ಕೊರೆದಿದ್ದು, ಒಂದನ್ನು ಹಾಗೇ ಬಿಡಲಾಗಿದೆ. ಮತ್ತೊಂದು ಬೋರ್ವೆಲ್ಗೆ ಪಂಪ್ ಸೆಟ್ ಅಳವಡಿಸಲಾಗಿತ್ತು. ಆದರೆ ಈ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರ ಪರದಾಟಕ್ಕೆ ಇಂದಿಗೆ 10 ದಿನಗಳೇ ಕಳೆದಿವೆ.
ಪಂಚಾಯತ್ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ರಿಪೇರಿಗೆ ಹಣದ ಕೊರತೆ ಇದೆ ಎಂದು ಕಾರಣ ಹೇಳುತ್ತಿದ್ದಾರಂತೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಸಮಸ್ಯೆಯತ್ತ ಗಮನ ಹರಿಸದೆ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಸಕರು ಪ್ರತಿ ಸಭೆಗಳಲ್ಲಿ ನೀರು ಹಾಗೂ ರಸ್ತೆಗಳ ಸಮಸ್ಯೆ ನಿವಾರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಇತ್ತ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. "ಅತ್ತ ಶಾಸಕರ ಮಾತಿಗೂ ಕಿಮ್ಮತ್ತಿಲ್ಲ. ಇತ್ತ ಜನರ ಸಮಸ್ಯೆಗೆ ಪರಿಹಾರವೂ ಇಲ್ಲ" ಎಂದಾದರೆ ಸರ್ಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸಮಸ್ಯೆಯನ್ನ ಶೀಘ್ರದಲ್ಲೇ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.